ಅಮೆರಿಕದಲ್ಲಿ ರಕ್ಷಣಾ ಇಲಾಖೆಗೆ ಯುದ್ಧ ಇಲಾಖೆ ಎಂದು ಮರುನಾಮಕರಣ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್ : ಅಮೆರಿಕದಲ್ಲಿ ರಕ್ಷಣಾ ಇಲಾಖೆಯನ್ನು ಯುದ್ಧ ಇಲಾಖೆ ಎಂದು ಮರುನಾಮಕರಣ ಮಾಡುವ ಸುಳಿವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದು, ಇದು ಉತ್ತಮ ಪದ ಎಂದು ಅವರು ಬಣ್ಣಿಸಿದ್ದಾರೆ.
ಈ ಮರುನಾಮಕರಣ ಆದೇಶಕ್ಕೆ ಟ್ರಂಪ್ ಶುಕ್ರವಾರ ಸಹಿ ಮಾಡಲಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. "ಪೀಟ್ ಹೆಗ್‍ಸೆಥ್ ರಕ್ಷಣಾ ಇಲಾಖೆ ಎಂದು ಕರೆಯುವ ಮೂಲಕ ಇದನ್ನು ಆರಂಭಿಸಿದರು. ಆದರೆ ನನಗೆ ಇದು ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ. ನಾವು ಏಕೆ ರಕ್ಷಣೆ ಮಾಡಿಕೊಳ್ಳಬೇಕು? ಇದನ್ನು ಯುದ್ಧ ಇಲಾಖೆ ಎಂದು ಕರೆಯಬೇಕು. ಇದು ಪ್ರಬಲ ಸಂದೇಶ ನೀಡುತ್ತದೆ. ನಿಮಗೆ ತಿಳಿದಿರುವಂತೆ ನಾವು 1ನೇ ಮಹಾಯುದ್ಧ ಮತ್ತು 2ನೇ ಮಹಾಯುದ್ಧ ಗೆದ್ದಿದ್ದೇವೆ. ನಾವು ಎಲ್ಲವನ್ನೂ ಗೆದ್ದಿದ್ದೇವೆ. ನಮಗೆ ರಕ್ಷಣಾ ಇಲಾಖೆ ಇದೆ. ನಾವು ರಕ್ಷಕರು" ಎಂದು ಟ್ರಂಪ್ ತಮ್ಮ ಓವಲ್ ಆಫೀಸ್‍ನಲ್ಲಿ ಮಾಧ್ಯಮ ಜತೆ ಮಾತನಾಡುತ್ತಾ ಬಣ್ಣಿಸಿದರು.
ಉತ್ತಮ ಅರ್ಥ ಕೊಡುವ ಯುದ್ಧ ಇಲಾಖೆ ಎಂಬ ಪದಕ್ಕೆ ಮರಳುವ ಬದಲಾವಣೆಗೆ ಮತ ಹಾಕುವಂತೆ ತಮ್ಮ ಸಂಪುಟದತ್ತ ತಿರುಗಿ ಮನವಿ ಮಾಡಿದರು.
"ನನಗೆ ಗೊತ್ತಿಲ್ಲ. ನೀವು ನನ್ನ ಹಿಂದೆ ನಿಂತರೆ, ಮತ ಹಾಕಿದರೆ, ನಾವು ಎಲ್ಲ ಸಮಯದಲ್ಲೂ ಯುದ್ಧವನ್ನು ಗೆಲ್ಲಬೇಕು ಎಂದಿದ್ದರೆ, ನನ್ನ ಚಿಂತನೆ ಸರಿ ಎನಿಸಿದರೆ. ಸರಿಯೇ? ನೀವು ಇದನ್ನು ಮಾಡುತ್ತೀರಿ ಎಂದು ತಿಳಿಯಲೇ? ನನ್ನ ಪ್ರಕಾರ ಯುದ್ಧ ಇಲಾಖೆ ಎನ್ನುವುದು ಒಳ್ಳೆಯ ಅರ್ಥ ನೀಡುತ್ತದೆ" ಎಂದು ಟ್ರಂಪ್ ವಿವರಿಸಿದರು.
ಅಮೆರಿಕದ ಯುದ್ಧ ಇಲಾಖೆ 1789ರಲ್ಲಿ ಆರಂಭವಾಗಿದ್ದು, ಯುದ್ಧ ಕಾರ್ಯದರ್ಶಿ ಅಮೆರಿಕದ ಭೂಸೇನೆ ಮತ್ತು ನೌಕಾಪಡೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. 1798ರಲ್ಲಿ ಪ್ರತ್ಯೇಕ ನೌಕಾ ಇಲಾಖೆ ಆರಂಭಿಸಲಾಯಿತು. ವಾಯುಪಡೆ ಸೇರ್ಪಡೆಯಾದಾಗ ಅದರ ಹೊಣೆಯೂ ಯುದ್ಧ ಇಲಾಖೆಗೆ ಬಂತು. ಪೆಂಟಗಾನ್ ಅಡಿಯಲ್ಲಿ ನ್ಯಾಷನಲ್ ಮಿಲಿಟರಿ ಎಸ್ಟಾಬ್ಲಿಷ್‍ಮೆಂಟ್ (ಎನ್‍ಎಂಇ) ಜಾರಿಗೆ ಬಂದ ಬಳಿಕ ಇದನ್ನು ರಕ್ಷಣಾ ಇಲಾಖೆ ಎಂದು ಕರೆಯಲಾಯಿತು.