ಗಾಝಾದ ಸಂಪೂರ್ಣ ನಿಯಂತ್ರಣಕ್ಕೆ ಅಮೆರಿಕ ಯೋಜನೆ: ವರದಿ
► ಜನಸಂಖ್ಯೆಯ ಸ್ಥಳಾಂತರಕ್ಕೆ `ಗ್ರೇಟ್ ಟ್ರಸ್ಟ್' ಯೋಜನೆ ► ಗಾಝಾ ಮಾರಾಟಕ್ಕಿಲ್ಲ ಎಂದ ಹಮಾಸ್
PC | Reuters
ವಾಷಿಂಗ್ಟನ್, ಸೆ.1: ಯುದ್ಧಾನಂತರದ ಯೋಜನೆಯಾಗಿ ಗಾಝಾದ ಸಂಪೂರ್ಣ ಜನಸಂಖ್ಯೆಯನ್ನು ಸ್ಥಳಾಂತರಿಸಿ ಕನಿಷ್ಠ ಒಂದು ದಶಕದವರೆಗೆ ಗಾಝಾದ ಆಡಳಿತವನ್ನು ನಿಯಂತ್ರಣಕ್ಕೆ ಪಡೆಯುವ ಪ್ರಸ್ತಾಪವನ್ನು ಟ್ರಂಪ್ ಆಡಳಿತ ಪರಿಶೀಲಿಸುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಪ್ರವಾಸೀ ತಾಣವಾಗಿ ಮತ್ತು ಉತ್ಪಾದನಾ ಕೇಂದ್ರವಾಗಿ ಮರುನಿರ್ಮಿಸಿ ಗಾಝಾವನ್ನು `ಮಧ್ಯಪ್ರಾಚ್ಯದ ರಿವೇರಿಯಾ'ವನ್ನಾಗಿಸಲು ಟ್ರಂಪ್ ಆಡಳಿತ ಬಯಸಿದೆ ಎಂದು ವರದಿ ಹೇಳಿದೆ(ರಿವೇರಿಯಾ ಎಂಬುದು ಫ್ರಾನ್ಸ್ ಮತ್ತು ಇಟಲಿ ನಡುವೆ ಇರುವ ಪ್ರಸಿದ್ಧ ಪ್ರವಾಸೀ ತಾಣ). ತನಗೆ ಲಭಿಸಿದ 38 ಪುಟಗಳ ವಿವರಣ ಪತ್ರದ ಪ್ರಕಾರ, ಗಾಝಾದ ಸುಮಾರು 2 ದಶಲಕ್ಷ ಜನಸಂಖ್ಯೆಯು ಮತ್ತೊಂದು ದೇಶಕ್ಕೆ ಸ್ವಯಂಪ್ರೇರಿತವಾಗಿ ನಿರ್ಗಮಿಸುತ್ತದೆ ಅಥವಾ ಅವರನ್ನು ಪುನನಿರ್ಮಾಣದ ಸಮಯದಲ್ಲಿ ಪ್ರದೇಶದೊಳಗಿನ ನಿರ್ಬಂಧಿತ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುವುದು.
ಫೆಲೆಸ್ತೀನ್ ಜನಸಂಖ್ಯೆ ವಾಸಿಸಲು ಗಾಝಾದ ಹೊರಭಾಗದಲ್ಲಿ `ಹ್ಯುಮಾನಿಟೇರಿಯನ್ ಟ್ರಾನ್ಸಿಟ್ ಏರಿಯಾ' ಎಂದು ಕರೆಯಲಾಗುವ ಬೃಹತ್ ಪ್ರಮಾಣದ ಶಿಬಿರಗಳನ್ನು ನಿರ್ಮಿಸುವ ಪ್ರಸ್ತಾಪವಿದೆ ಎಂದು `ರಾಯ್ಟರ್ಸ್' ಇತ್ತೀಚೆಗೆ ವರದಿ ಮಾಡಿತ್ತು.
ಭೂಮಿಯನ್ನು ಹೊಂದಿರುವವರಿಗೆ ತಮ್ಮ ಆಸ್ತಿಗಳನ್ನು ಪುನರಾಭಿವೃದ್ಧಿಪಡಿಸುವ ಹಕ್ಕುಗಳಿಗೆ ಪ್ರತಿಯಾಗಿ `ಡಿಜಿಟಲ್ ಟೋಕನ್' ನೀಡಲಾಗುವುದು. ಗಾಝಾದಿಂದ ನಿರ್ಗಮಿಸುವ ಪ್ರತೀ ಫೆಲೆಸ್ತೀನೀಯರಿಗೆ 5 ಸಾವಿರ ಡಾಲರ್ ನಗದು ಹಾಗೂ 4 ವರ್ಷಗಳ ಬಡ್ಡಿಯಲ್ಲಿ ಸಬ್ಸಿಡಿ, ಜೊತೆಗೆ ಒಂದು ವರ್ಷದ ಆಹಾರ ನೀಡಲಾಗುವುದು. `ಗಾಝಾ ಮರುನಿರ್ಮಾಣ, ಆರ್ಥಿಕ ವೇಗವರ್ಧನೆ ಮತ್ತು ಪರಿವರ್ತನೆ ಟ್ರಸ್ಟ್ ಅಥವಾ `ಗ್ರೇಟ್ ಟ್ರಸ್ಟ್' ಎಂದು ಹೆಸರಿಸಲಾಗಿರುವ ಯೋಜನೆಯನ್ನು ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಗಾಝಾದಲ್ಲಿ ಮಾನವೀಯ ನೆರವು ವಿತರಣೆಗೆ ಅಮೆರಿಕ ನೇಮಿಸಿರುವ ಸಂಸ್ಥೆ) ಅಭಿವೃದ್ಧಿಪಡಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.
ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾವನ್ನು ಅಮೆರಿಕಾ ನಿಯಂತ್ರಣಕ್ಕೆ ಪಡೆಯಬೇಕು. ಅಲ್ಲಿರುವ ಫೆಲೆಸ್ತೀನಿಯನ್ನರನ್ನು ಬೇರೆಡೆ ಪುನರ್ವಸತಿ ಮಾಡಿದ ಬಳಿಕ ಅದನ್ನು ಮಧ್ಯಪ್ರಾಚ್ಯದ ರಿವೇರಿಯಾವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಫೆಬ್ರವರಿ 4ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಯು ಗಾಝಾದ ಜನಸಂಖ್ಯೆಯನ್ನು ಬಲವಂತವಾಗಿ ಸ್ಥಳಾಂತರಿಸುವ ಸುಳಿವು ನೀಡಿದೆ ಎಂದು ಫೆಲೆಸ್ತೀನಿಯರು ಹಾಗೂ ಮಾನವ ಹಕ್ಕುಗಳ ಗುಂಪುಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಗಾಝಾ ಮಾರಾಟಕ್ಕಿಲ್ಲ: ಹಮಾಸ್
ಗಾಝಾ ಪಟ್ಟಿಯ ಮೇಲೆ ಹಿಡಿತ ಸಾಧಿಸಲು ಮತ್ತು ಅದರ ಜನಸಂಖ್ಯೆಯನ್ನು ಸ್ಥಳಾಂತರಿಸಲು ಅಮೆರಿಕ ಪರಿಗಣಿಸಿರುವ ಯೋಜನೆಯನ್ನು ತಿರಸ್ಕರಿಸುವುದಾಗಿ ಹಮಾಸ್ ಸೋಮವಾರ ಪ್ರತಿಕ್ರಿಯಿಸಿದೆ.
'ಗಾಝಾ ಮಾರಾಟಕ್ಕಿಲ್ಲ. ಗಾಝಾವು ಗ್ರೇಟರ್ ಫೆಲೆಸ್ತೀನ್ ತಾಯ್ನಾಡಿನ ಭಾಗವಾಗಿದೆ' ಎಂದು ಹಮಾಸ್ ರಾಜಕೀಯ ಬ್ಯೂರೋ ಸದಸ್ಯ ಬಾಸ್ಸೆಮ್ ನಯೀಮ್ ಖಂಡಿಸಿದ್ದಾರೆ.
ನಮ್ಮ ಜನರನ್ನು ಪರಿತ್ಯಜಿಸುವ ಮತ್ತು ನಮ್ಮ ಭೂಮಿಯನ್ನು ಆಕ್ರಮಣಕಾರರಿಗೆ ಒಪ್ಪಿಸುವ ಇಂತಹ ಯೋಜನೆಗಳನ್ನು ಹಮಾಸ್ ತಿರಸ್ಕರಿಸುತ್ತದೆ. ಇದುವರೆಗೆ ಯೋಜನೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಇಂತಹ ಪ್ರಸ್ತಾಪಗಳು ನಿಷ್ಪ್ರಯೋಜಕ ಮತ್ತು ಅಸಮರ್ಥನೀಯ' ಎಂದು ಹಮಾಸ್ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.