ಭಾರತದ ಮೇಲೆ ಹೆಚ್ಚಿನ ನಿರ್ಬಂಧ ಹೇರಲಾಗುವುದು : 50% ಸುಂಕ ವಿಧಿಸಿದ ಬೆನ್ನಲ್ಲೇ ಟ್ರಂಪ್ ಮತ್ತೆ ಬೆದರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ಮಾಡಿಕೊಳ್ಳುತ್ತಿರುವುದಕ್ಕೆ ಭಾರತವನ್ನು ಗುರಿಯಾಗಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಬುಧವಾರ ಶೇಕಡಾ 50ರಷ್ಟು ಸುಂಕವನ್ನು ಘೋಷಿಸಿದ್ದರು. ಇದೀಗ ಭಾರತಕ್ಕೆ ಮತ್ತಷ್ಟು ನಿರ್ಬಂಧವನ್ನು ಹೇರುವುದಾಗಿ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರದ ಬಗ್ಗೆ ಪ್ರಶ್ನೆಗೆ ಟ್ರಂಪ್ ಪ್ರತಿಕ್ರಿಯಿಸುತ್ತಾ, ಮತ್ತಷ್ಟು ನಿರ್ಬಂಧದ ಬಗ್ಗೆ ಬೆದರಿಕೆ ಹಾಕಿದ್ದಾರೆ.
ಉಕ್ರೇನ್ ಮತ್ತು ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡರೆ, ಭಾರತದ ಮೇಲಿನ ಹೆಚ್ಚುವರಿ ಸುಂಕವನ್ನು ಕೈಬಿಡುತ್ತೀರಾ ಎಂಬ ಪ್ರಶ್ನೆಗೆ, ಟ್ರಂಪ್, ನಾವು ಅದನ್ನು ನಂತರ ನಿರ್ಧರಿಸುತ್ತೇವೆ. ಆದರೆ ಈಗ ಭಾರತ ಶೇಕಡಾ 50ರಷ್ಟು ಸುಂಕವನ್ನು ಪಾವತಿಸಬೇಕು ಎಂದು ಹೇಳಿದರು.
ಚೀನಾದಂತಹ ಇತರ ದೇಶಗಳು ರಷ್ಯಾದ ತೈಲವನ್ನು ಖರೀದಿಸುತ್ತಿವೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ ಎಂದು ಟ್ರಂಪ್ ಗೆ ತಿಳಿಸಲಾಯಿತು, ಅದಕ್ಕೆ "ಪರವಾಗಿಲ್ಲ" ಎಂದು ಪ್ರತಿಕ್ರಿಯಿಸಿದರು. ಭಾರತದ ಮೇಲೆ ಮಾತ್ರ ಏಕೆ ಪ್ರತ್ಯೇಕ ಕ್ರಮ ಎಂದು ಕೇಳಿದ್ದಕ್ಕೆ ಅಮೆರಿಕ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ನೋಡೋಣ. ನೀವು ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ನೋಡಲಿದ್ದೀರಿ ಎಂದು ಹೇಳಿದರು.