ಅಮೆರಿಕ ಅಧ್ಯಕ್ಷೀಯ ಚುನಾವಣೆ | ಮತ್ತೊಬ್ಬ ಅಭ್ಯರ್ಥಿ ಕಣಕ್ಕೆ
ಚೇಸ್ ಒಲಿವರ್ | PC : X/@LPNational
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಮೂರನೇ ಅಭ್ಯರ್ಥಿಯಾಗಿ ಚೇಸ್ ಒಲಿವರ್ ರನ್ನು ಲಿಬರ್ಟೇರಿಯನ್ನರು ನಾಮನಿರ್ದೇಶನ ಮಾಡಿದ್ದಾರೆ.
ಆರ್ಥಿಕ ವಿಷಯಗಳಲ್ಲಿ ಸಂಪ್ರದಾಯವಾದ(ಕನ್ಸರ್ವೇಟಿವ್) ಮತ್ತು ವೈಯಕ್ತಿಕ ಸ್ವಾತಂತ್ರ್ಯದ ವಿಷಯದಲ್ಲಿ ಉದಾರವಾದ(ಲಿಬರಲಿಸಂ)ದ ಪ್ರತಿಪಾದಕರಾದ ಲಿಬರ್ಟೇರಿಯನ್ನರು ಅಮೆರಿಕದ ಎರಡು ರಾಜಕೀಯ ಪಕ್ಷಗಳಾದ ಡೆಮೊಕ್ರಟಿಕ್ ಅಥವಾ ರಿಪಬ್ಲಿಕನ್ ಪಕ್ಷಗಳ ಜತೆ ಗುರುತಿಸಿಕೊಂಡಿಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸಾಮಾನ್ಯವಾಗಿ ತೃತೀಯ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳನ್ನು ಪಡೆಯುವುದಿಲ್ಲ. 2020ರ ಚುನಾವಣೆಯಲ್ಲಿ ಲಿಬರ್ಟೇರಿಯನ್ ಅಭ್ಯರ್ಥಿ ಚಲಾವಣೆಗೊಂಡ ಮತಗಳಲ್ಲಿ 1%ವನ್ನು ಮಾತ್ರ ಪಡೆದಿದ್ದರು.
ಆದರೆ ಈ ಬಾರಿ ಡೆಮೊಕ್ರಟಿಕ್ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತು ರಿಪಬ್ಲಿಕನ್ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ತುರುಸಿನ ಪೈಪೋಟಿಯ ನಿರೀಕ್ಷೆ ಇರುವುದರಿಂದ ತೃತೀಯ ಅಭ್ಯರ್ಥಿ ಪಡೆಯುವ ಮತಗಳು ನಿರ್ಣಾಯಕವಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.