×
Ad

ಅಮೆರಿಕ: ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಗುಂಡಿಗೆ ಬಲಿ; ಶಂಕಿತ ವ್ಯಕ್ತಿ ಪೊಲೀಸ್ ವಶಕ್ಕೆ

Update: 2025-09-11 07:53 IST

PC: x.com/WakeUpPatriott

ವಾಷಿಂಗ್ಟನ್: ಸಂಪ್ರದಾಯವಾದಿ ಹೋರಾಟಗಾರ ಮತ್ತು 'ಟರ್ನಿಂಗ್ ಪಾಯಿಂಟ್ ಯುಎಸ್ಎ' ಸಹಸಂಸ್ಥಾಪಕ ಮತ್ತು ಸಿಇಓ ಚಾರ್ಲಿ ಕಿರ್ಕ್ ಉತ್ ವ್ಯಾಲಿ ವಿಶ್ವವಿದ್ಯಾನಿಲಯ (ಯುವಿಯು)ದಲ್ಲಿ ಮಾತನಾಡುವ ವೇಳೆ ಗುಂಡೇಟಿಗೆ ಬಲಿಯಾಗಿದ್ದಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಕಿರ್ಕ್ ವಿದ್ಯಾರ್ಥಿಗಳಿಂದ "ಅಮೆರಿಕ ಕಮ್ ಬ್ಯಾಕ್" ಮತ್ತು "ಪ್ರೂವ್ ಮಿ ರಾಂಗ್" ಎಂಬ ಘೋಷಣೆಗಳನ್ನು ಕೂಗುವಂತೆ ಸೂಚಿಸುತ್ತಿದ್ದಾಗ ಒಂದು ಗುಂಡಿನ ಸದ್ದು ಕೇಳಿಬಂದಿದೆ.

ಗಂಟಲನ್ನು  ಹಿಡಿದುಕೊಂಡ ಕಿರ್ಕ್ ಅವರ ಗಾಯದಿಂದ ರಕ್ತ ಸುರಿಯುತ್ತಿದ್ದ ಭಯಾನಕ ದೃಶ್ಯದ ವಿಡಿಯೊ ಅಮೆರಿಕನ್ನರನ್ನು ಬೆಚ್ಚಿ ಬೀಳಿಸಿದೆ. ಕಿರ್ಕ್ ಅವರ ಆಪ್ತ ಸ್ನೇಹಿತ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಿರ್ಕ್ ಹತ್ಯೆಯನ್ನು ದೃಢಪಡಿಸಿದ್ದು, ಮೃತ ಹೋರಾಟಗಾರನ ಗೌರವಾರ್ಥ ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶಿಸಿದ್ದಾರೆ.

ಗುಂಡು ಹೊಡೆದ ಶಂಕಿತ ವ್ಯಕ್ತಿ ಪೊಲೀಸರ ವಶದಲ್ಲಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಎಫ್‌ಬಿಐ ನಿರ್ದೇಶಕ ಕಶ್ ಪಟೇಲ್ ಬಂಧನವನ್ನು ಪ್ರಕಟಿಸಿದ್ದು, ತ್ವರಿತ ಕ್ರಮಕ್ಕಾಗಿ ಕಾನೂನು ಜಾರಿ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. "ಇಂದಿನ ಭಯಾನಕ ಶೂಟಿಂಗ್ ನಲ್ಲಿ ಚಾರ್ಲಿ ಕಿರ್ಕ್ ಅವರ ಜೀವ ಬಲಿ ಪಡೆದ ವ್ಯಕ್ತಿ ಇದೀಗ ಕಸ್ಟಡಿಯಲ್ಲಿದ್ದಾನೆ" ಎಂದು ಪಟೇಲ್ ಎಕ್ಸ್ ಪೋಸ್ಟ್ ನಲ್ಲಿ ಪ್ರಕಟಿಸಿದ್ದಾರೆ.

ಉತ್ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಪ್ರಕರಣದಲ್ಲಿ ಒಬ್ಬ ಆರೋಪಿ ಮಾತ್ರ ಷಾಮೀಲಾಗಿದ್ದ ಎನ್ನುವುದನ್ನು ಉತ್ ಗವರ್ನರ್ ಸ್ಪೆನ್ಸರ್ ಕಾಕ್ಸ್ ದೃಢಪಡಿಸಿದ್ದಾರೆ. ಯಾವ ಮಾಹಿತಿಯೂ ಘಟನೆಯಲ್ಲಿ ಎರಡನೇ ವ್ಯಕ್ತಿ ಷಾಮೀಲಾಗಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ತನಿಖೆ ನಡೆಯುತ್ತಿದ್ದು, ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News