ಭಾರತೀಯ ಮೂಲದವರಾಗಿರುವ ನನ್ನ ಪತ್ನಿ ಉಷಾ ಶೀಘ್ರದಲ್ಲೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ : ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
“ಅವರೇನಾದರೂ ಮತಾಂತರಗೊಳ್ಳದಿದ್ದರೆ…?”
ಉಷಾ ವ್ಯಾನ್ಸ್ , ಜೆ.ಡಿ.ವ್ಯಾನ್ಸ್ | Photo Credit : NDTV
ವಾಷಿಂಗ್ಟನ್: ಭಾರತೀಯ ಮೂಲದವರಾಗಿರುವ ನನ್ನ ಪತ್ನಿ ಉಷಾ ವ್ಯಾನ್ಸ್ ಒಂದು ದಿನ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಿಸಿಸ್ಸಿಪ್ಪಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಟರ್ನಿಂಗ್ ಪಾಯಿಂಟ್ ಯುಎಸ್ಎ’ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿ ವ್ಯಾನ್ಸ್, “ಈಗ ಉಷಾ ಪ್ರತಿ ರವಿವಾರ ನನ್ನೊಂದಿಗೆ ಚರ್ಚ್ ಗೆ ಬರುತ್ತಾರೆ ಎಂದು ಹೇಳಿದ್ದಾರೆ.
ನಾನು ಆಕೆಗೆ ಹೇಳಿದ್ದೇನೆ ಹಾಗೂ ಸಾರ್ವಜನಿಕವಾಗಿಯೂ ತಿಳಿಸಿದ್ದೇನೆ. ನಾನಿಂದು ನನ್ನ 10,000 ಅತ್ಯಾಪ್ತ ಸ್ನೇಹಿತರ ಎದುರೂ ಹೇಳುತ್ತೇನೆ. ನಾನು ಚರ್ಚ್ ನಿಂದ ಪ್ರಭಾವಿತನಾದಂತೆ, ನನ್ನ ಪತ್ನಿಯೂ ಪ್ರಭಾವಿತರಾಗಬಲ್ಲರು. ನಾನು ಕ್ರೈಸ್ತ ಧರ್ಮದ ಮೇಲೆ ನಂಬಿಕೆ ಇರಿಸಿದ್ದು, ನನ್ನ ಪತ್ನಿ ಕೂಡಾ ಮುಂದೆ ಅದನ್ನು ಹಾಗೆಯೇ ನೋಡುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದ್ದಾರೆ.
“ಹೀಗಿದ್ದೂ, ಅವರೇನಾದರೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ, ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ ಎಂದು ದೇವರು ಹೇಳುತ್ತಾನೆ. ಹೀಗಾಗಿ, ಅದು ನನಗೆ ಸಮಸ್ಯೆಯನ್ನುಂಟು ಮಾಡುವುದಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
“ಉಷಾ ಹಿಂದೂ ಕುಟುಂಬದಲ್ಲಿ ಬೆಳೆದರು. ಆದರೆ ಅದು ವಿಶೇಷವಾಗಿ ಧಾರ್ಮಿಕ ಕುಟುಂಬವಲ್ಲ. ಅವರನ್ನು ಭೇಟಿಯಾದಾಗ, ನಾನು ನಾಸ್ತಿಕನಾಗಿದ್ದೆ; ಅವರೂ ಹಾಗೆಯೇ ಇದ್ದರು. ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್‌ರನ್ನು ಕ್ರಿಶ್ಚಿಯನ್ ನಂಬಿಕೆಯಲ್ಲಿ ಬೆಳೆಸಲು ನಿರ್ಧರಿಸಿದ್ದೇವೆ. ಅವರು ಕ್ರಿಶ್ಚಿಯನ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ,” ಎಂದು ಜೆಡಿ ವ್ಯಾನ್ಸ್ ಹೇಳಿದರು.
ಇದಕ್ಕೂ ಮೊದಲು ಉಷಾ ವ್ಯಾನ್ಸ್ ‘ಸಿಟಿಜನ್ ಮೆಕೇನ್’ ಪಾಡ್‌ಕ್ಯಾಸ್ಟ್‌ನಲ್ಲಿ ಮೇಘನ್ ಮೆಕೇನ್ ಅವರೊಂದಿಗೆ ಮಾತನಾಡಿದ ವೇಳೆ, ಅಂತರ್‌ಧರ್ಮದ ಕುಟುಂಬದಲ್ಲಿ ಮಕ್ಕಳನ್ನು ಬೆಳೆಸುವ ಕುರಿತು ತಮ್ಮ ಅನುಭವ ಹಂಚಿಕೊಂಡಿದ್ದರು.“ನಾವು ಮಕ್ಕಳನ್ನು ಕ್ಯಾಥೋಲಿಕ್ ಶಾಲೆಗೆ ಕಳುಹಿಸುತ್ತೇವೆ. ಆದರೆ ಅವರು ಬ್ಯಾಪ್ಟಿಸಮ್ ಆಯ್ಕೆ ಮಾಡಿಕೊಂಡರೆ ಅದು ಅವರ ಸ್ವತಂತ್ರ ಆಯ್ಕೆ. ನಾವು ಅವರಿಗೆ ಆ ಅವಕಾಶ ನೀಡಿದ್ದೇವೆ,” ಎಂದು ಉಷಾ ಹೇಳಿದ್ದಾರೆ.
ಯೇಲ್ ವಿಶ್ವವಿದ್ಯಾಲಯದಲ್ಲಿ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದಾಗ ಅವರು ಕ್ಯಾಥೋಲಿಕ್ ಆಗಿರಲಿಲ್ಲ ಎಂದು ಉಷಾ ಹೇಳಿದ್ದರು. “ಅವರು ಮತಾಂತರಗೊಂಡದ್ದು ನಮ್ಮ ಮೊದಲ ಮಗುವಾದ ವಿವೇಕ್ ಜನಿಸಿದ ನಂತರ. ಆ ಸಂದರ್ಭ ನಾವು ಹಲವು ಸಂಭಾಷಣೆಗಳನ್ನು ನಡೆಸಿದ್ದೇವೆ. ನಾನು ಕ್ಯಾಥೋಲಿಕ್ ಅಲ್ಲ, ಮತಾಂತರಗೊಳ್ಳುವ ಉದ್ದೇಶವೂ ಇಲ್ಲ. ಆದರೆ ಪರಸ್ಪರದ ನಂಬಿಕೆಗಳಿಗೆ ಗೌರವ ನೀಡುತ್ತೇವೆ,” ಎಂದು ಉಷಾ ವ್ಯಾನ್ಸ್ ಹೇಳಿದ್ದಾರೆ.