"ಅಮಾನವೀಯ ಕೃತ್ಯ": ಗಾಝಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ ವ್ಯಾಟಿಕನ್ ಕಾರ್ಡಿನಲ್
ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್ (Photo credit: aa.com.tr)
ವ್ಯಾಟಿಕನ್ : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ವ್ಯಾಟಿಕನ್‌ನ ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್ ಖಂಡಿಸಿದ್ದು, ಅಮಾನವೀಯ ಮತ್ತು ಅಸಮರ್ಥನೀಯ ಕೃತ್ಯ ಎಂದು ಕರೆದಿದ್ದಾರೆ. ಇದು ಕ್ಯಾಥೋಲಿಕ್ ಚರ್ಚ್ ಇಸ್ರೇಲ್ ವಿರುದ್ಧ ನೀಡಿದ ಅತ್ಯಂತ ಕಠಿಣ ಹೇಳಿಕೆಗಳಲ್ಲಿ ಒಂದಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಮತ್ತು ಪೋಪ್ ಲಿಯೋ ಅವರ ಸಹಾಯಕರಲ್ಲಿ ಓರ್ವರಾದ ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್, ಗಾಝಾ ಯುದ್ಧದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ದಾಳಿಗಳನ್ನು ಅಮಾನವೀಯ ಮತ್ತು ಅಸಮರ್ಥನೀಯ ಎಂದು ಕರೆದರು. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವಂತೆ ಹಮಾಸ್ ಅನ್ನು ಅವರು ಒತ್ತಾಯಿಸಿದರು.
ದಾಳಿಗೊಳಗಾದವರಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕಿದೆ. ಆದರೆ ರಕ್ಷಣೆಯೂ ಅನುಪಾತದ ತತ್ವವನ್ನು ಪಾಲಿಸಬೇಕು. ಹಮಾಸ್ ಅನ್ನು ನಿರ್ಮೂಲನೆ ಮಾಡಲು ಇಸ್ರೇಲ್ ಸೈನ್ಯವು ನಡೆಸಿದ ಯುದ್ಧವು ಈಗಾಗಲೇ ಸಂಕಷ್ಟದಲ್ಲಿರುವ, ಬಹುತೇಕ ರಕ್ಷಣೆಯಿಲ್ಲದ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ. ಕಟ್ಟಡಗಳು ಮತ್ತು ಮನೆಗಳು ಧ್ವಂಸಗೊಂಡಿದ್ದು, ಅಲ್ಲಿನ ಜನರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ದುರದೃಷ್ಟವಶಾತ್, ಅಂತಾರಾಷ್ಟ್ರೀಯ ಸಮುದಾಯವು ಈ ಹತ್ಯಾಕಾಂಡ ನಿಲ್ಲಿಸುವಲ್ಲಿ ಅಸಹಾಯಕವಾಗಿದೆ. ಪ್ರಭಾವ ಬೀರಲು ನಿಜವಾಗಿಯೂ ಸಮರ್ಥವಾಗಿರುವ ದೇಶಗಳು ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯಲು ಇಲ್ಲಿಯವರೆಗೆ ಕ್ರಮ ಕೈಗೊಳ್ಳಲು ವಿಫಲವಾಗಿವೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ಯಾರೋಲಿನ್ ಮಾಧ್ಯಮ ಸಂಸ್ಥೆಗೆ ತಿಳಿಸಿದರು.