×
Ad

ಇಸ್ರೇಲ್, ಹಮಾಸ್ ಇಬ್ಬರಿಂದಲೂ ಯುದ್ಧಾಪರಾಧ: ವಿಶ್ವಸಂಸ್ಥೆ ಕಳವಳ

Update: 2023-11-09 22:46 IST

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್ Photo: news.un.org

ಜಿನೆವಾ: ಒಂದು ತಿಂಗಳ ಹಿಂದೆ ಭುಗಿಲೆದ್ದ ಸಂಘರ್ಷದಲ್ಲಿ ಇಸ್ರೇಲ್ ಮತ್ತು ಹಮಾಸ್ ಎರಡೂ ಯುದ್ಧಾಪರಾಧಗಳನ್ನು ಎಸಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಕರ್ ಟರ್ಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 7ರಂದು ಫೆಲೆಸ್ತೀನ್ ಸಶಸ್ತ್ರ ಗುಂಪು(ಹಮಾಸ್) ನಡೆಸಿದ ದುಷ್ಕೃತ್ಯಗಳು ಘೋರವಾಗಿದ್ದು ಅವರು ಇನ್ನೂ ಒತ್ತೆಯಾಳುಗಳನ್ನು ಇರಿಸಿಕೊಂಡಿರುವುದರಿಂದ ಇದು ಯುದ್ಧಾಪರಾಧವಾಗಿವೆ. ಫೆಲೆಸ್ತೀನಿನ ನಾಗರಿಕರಿಗೆ ಇಸ್ರೇಲ್ ನೀಡುತ್ತಿರುವ ಸಾಮೂಹಿಕ ಶಿಕ್ಷೆ, ನಾಗರಿಕರನ್ನು ಕಾನೂನುಬಾಹಿರವಾಗಿ ಬಲವಂತವಾಗಿ ಸ್ಥಳಾಂತರಿಸುವುದೂ ಯುದ್ಧದ ಅಪರಾಧವಾಗಿದೆ' ಎಂದು ಗಾಝಾದ ಗಡಿಯಲ್ಲಿರುವ ರಫಾ ಗಡಿದಾಟುವಿನ ಬಳಿ ಸುದ್ಧಿಗಾರರ ಜತೆ ಮಾತನಾಡಿದ ವೋಕರ್ ಟರ್ಕ್ ಖಂಡಿಸಿದ್ದಾರೆ. ರಫಾ ಮೂಲಕ ಮಾನವೀಯ ನೆರವು ಒದಗಿಸುವ ಬಗ್ಗೆ ಮಾತನಾಡಿದ ಟರ್ಕ್ `ಜೀವಸೆಲೆ(ಅಗತ್ಯದ ವಸ್ತುಗಳ ಪೂರೈಕೆ) ಅತ್ಯಲ್ಪವಾಗಿದ್ದು ಇದು ಘೋರ ಅನ್ಯಾಯವಾಗಿದೆ' ಎಂದರು.

ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಲ್ಲಿ 1,400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು 240 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮಹಿಳೆಯರು, ಮಕ್ಕಳ ಸಹಿತ 10,500ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂಬ ವರದಿಯು ಎರಡೂ ಪಕ್ಷಗಳು ಕದನ ವಿರಾಮಕ್ಕೆ ಒಪ್ಪಬೇಕಾದ ತುರ್ತು ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದು ಟರ್ಕ್ ಹೇಳಿದ್ದಾರೆ. ಇಲ್ಲಿ ಮೂರು ಮಾನವಹಕ್ಕುಗಳ ಅಗತ್ಯವಿದೆ. ಗಾಝಾಕ್ಕೆ ಸಾಕಷ್ಟು ಮಾನವೀಯ ನೆರವು ಪೂರೈಸುವುದು, ಒತ್ತೆಯಾಳುಗಳ ಬಿಡುಗಡೆ ಮತ್ತು ಆಕ್ರಮಣವನ್ನು ಶಾಶ್ವತವಾಗಿ ಅಂತ್ಯಗೊಳಿಸುವ ಕ್ರಮದ ಅನುಷ್ಟಾನದ ಅಗತ್ಯವಿದೆ. ನಾವು ಪ್ರಪಾತಕ್ಕೆ ಬಿದ್ದಿದ್ದೇವೆ ಮತ್ತು ಅಲ್ಲಿಯೇ ಮುಂದುವರಿಯಲು ಸಾಧ್ಯವಿಲ್ಲ. ಒಂದು ಪಕ್ಷದ ಕೃತ್ಯಗಳಿಗೆ ಪ್ರತೀಕಾರದ ಪರಿಣಾಮವನ್ನು ಮತ್ತೊಂದು ಪಕ್ಷ ಅನುಭವಿಸಬಾರದು' ಎಂದು ವೋಕರ್ ಟರ್ಕ್ ಹೇಳಿದ್ದಾರೆ.

ಗಾಝಾದಲ್ಲಿ ಮಾನವೀಯ ವಿರಾಮ ಜಾರಿಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು, ಮಾನವೀಯ ನೆರವು ಪೂರೈಕೆಗೆ ಅವಕಾಶ ನೀಡಬೇಕೆಂಬ ವಿಶ್ವಸಂಸ್ಥೆ ಮತ್ತು ಜಿ7 ದೇಶಗಳ ಕರೆಯನ್ನು ವಿರೋಧಿಸಿರುವ ಇಸ್ರೇಲ್, ಒತ್ತೆಯಾಳುಗಳ ಬಿಡುಗಡೆ ತನಕ ಕದನವಿರಾಮ ಸಾಧ್ಯವಿಲ್ಲ ಎಂದು ಹೇಳಿದೆ. ಗಾಝಾ ಆಕ್ರಮಣಕ್ಕೆ ಒಳಗಾಗಿರುವಾಗ ಹೋರಾಟ ನಿಲ್ಲಿಸಲು ಆಗದು ಎಂದು ಹಮಾಸ್ ಹೇಳುತ್ತಿದೆ. ಗಾಝಾದಲ್ಲಿ ಈಗಿನ ಪರಿಸ್ಥಿತಿ ಅಲ್ಲಿನ, ಪಶ್ಚಿಮದಂಡೆಯ, ಇಸ್ರೇಲ್‍ನ ನಾಗರಿಕರಿಗೆ ಮಾತ್ರವಲ್ಲ, ಪ್ರಾದೇಶಿಕವಾಗಿಯೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಟರ್ಕ್ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News