ಇರಾನ್ ನ ನೂತನ ಸರ್ವೋಚ್ಚ ನಾಯಕರ ನೇಮಕ ನಿರಾಸೆ ತಂದಿದೆ: ಟ್ರಂಪ್
ಮುಂದಿನ ಟಾರ್ಗೆಟ್ ಆಗುವರೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಣೆ
ಡೊನಾಲ್ಡ್ ಟ್ರಂಪ್ | Photo Credit : PTI
ಫ್ಲೋರಿಡಾ: ಹತ್ಯೆಯಾದ ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಉತ್ತರಾಧಿಕಾರಿಯಾಗಿ ಮೊಜ್ತಬಾ ಖಾಮಿನೈ ಅವರನ್ನು ಇರಾನ್ ನ ನೂತನ ಸರ್ವೋಚ್ಚ ನಾಯಕರಾಗಿ ನೇಮಿಸಿರುವುದು ತಮಗೆ ನಿರಾಸೆ ತಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ನಿರ್ಧಾರದಿಂದ ಇರಾನ್ ಮತ್ತೆ ಅದೇ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ನಾವು ಭಾವಿಸುತ್ತೇವೆ,” ಎಂದು ಹೇಳಿದರು.
ಮೊಜ್ತಬಾ ಖಾಮಿನೈ ಹೊಸ ಸರ್ವೋಚ್ಚ ನಾಯಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಗುರಿಪಡಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಟ್ರಂಪ್ ನೇರವಾಗಿ ಉತ್ತರಿಸಲು ನಿರಾಕರಿಸಿದರು. “ಅದರ ಬಗ್ಗೆ ಈಗ ಹೇಳುವುದಿಲ್ಲ,” ಎಂದು ಅವರು ಹೇಳಿದರು.
ಅಯತೊಲ್ಲಾ ಖಾಮಿನೈ ಅವರನ್ನು ಬದಲಿಸಿ ಅಧಿಕಾರಕ್ಕೆ ಬರುವ ಯಾವುದೇ ಹೊಸ ಇರಾನ್ ನಾಯಕನನ್ನೂ ಗುರಿಪಡಿಸುವ ಸಾಧ್ಯತೆ ಇದೆ ಎಂದು ಇಸ್ರೇಲ್ ಈ ಹಿಂದೆ ಹೇಳಿರುವುದಾಗಿ ವರದಿಗಳು ಸೂಚಿಸಿವೆ.
ಮೊಜ್ತಬಾ ಖಾಮಿನೈಯೊಂದಿಗೆ ಮುಂದಿನ ಸಂಬಂಧಗಳ ಕುರಿತು ತನ್ನ ಯೋಜನೆಗಳ ಬಗ್ಗೆ ವಿವರ ನೀಡಲು ಟ್ರಂಪ್ ನಿರಾಕರಿಸಿದರು. “ನಾನು ಅದನ್ನು ನಿಮಗೆ ಹೇಳುವುದಿಲ್ಲ. ಈ ಆಯ್ಕೆಯ ಬಗ್ಗೆ ನನಗೆ ತೃಪ್ತಿಯಿಲ್ಲ,” ಎಂದು ಅವರು ಹೇಳಿದರು.