ಪಶ್ಚಿಮದಂಡೆ: ಇಸ್ರೇಲ್ ದಾಳಿಯಲ್ಲಿ ಇಬ್ಬರು ಮೃತ್ಯು
Update: 2025-01-23 20:56 IST
ಸಾಂದರ್ಭಿಕ ಚಿತ್ರ | PC : NDTV
ರಮಲ್ಲಾ: ಆಕ್ರಮಿತ ಪಶ್ಚಿಮದಂಡೆಯ ಜೆನಿನ್ ನಗರದಲ್ಲಿ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಫೆಲೆಸ್ತೀನ್ ಸಶಸ್ತ್ರ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ.
ಬುರ್ಕಿನ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಸಶಸ್ತ್ರ ಹೋರಾಟಗಾರರು ಇರುವ ಬಗ್ಗೆ ದೊರೆತ ಮಾಹಿತಿಯಂತೆ ಇಸ್ರೇಲ್ ಪಡೆಗಳು ಮನೆಯನ್ನು ಸುತ್ತುವರಿದಿವೆ. ಆಗ ಮನೆಯೊಳಗಿಂದ ಗುಂಡಿನ ದಾಳಿ ಆರಂಭವಾಗಿದ್ದು ಇಸ್ರೇಲ್ ಪಡೆಯ ಪ್ರತಿದಾಳಿಯಲ್ಲಿ ಇಬ್ಬರನ್ನೂ ಹತ್ಯೆ ಮಾಡಲಾಗಿದೆ. ಘರ್ಷಣೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ.
ಹತರಾದವರನ್ನು ಮುಹಮ್ಮದ್ ನಝಾಲ್ ಮತ್ತು ಕುತೈಬಾ ಶಲಾಬಿ ಎಂದು ಗುರುತಿಸಲಾಗಿದ್ದು ಇವರು ಜನವರಿ 6ರಂದು ಪಶ್ಚಿಮದಂಡೆಯಲ್ಲಿ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದವರು ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ. ಜನವರಿ 6ರ ದಾಳಿಯಲ್ಲಿ ಮೂವರು ಇಸ್ರೇಲಿಯನ್ನರು ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದರು.