ಪಶ್ಚಿಮದಂಡೆಯಲ್ಲಿ ಹಿಂಸಾಚಾರ ಹೆಚ್ಚಳ: ವಿಶ್ವಸಂಸ್ಥೆ ಮುಖ್ಯಸ್ಥರ ಕಳವಳ
ಸಾಂದರ್ಭಿಕ ಚಿತ್ರ | PC : PTI
ಜಿನೆವಾ: ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತುಗಾರರಿಂದ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆ ಮತ್ತು ಫೆಲೆಸ್ತೀನ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನದ ಬಗ್ಗೆ ವಿಶ್ವಸಂಸ್ಥೆ ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಜಿನೆವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ `ಒಂದೊಂದಾಗಿ ಮಾನವ ಹಕ್ಕುಗಳನ್ನು ಉಸಿರುಗಟ್ಟಿಸಲಾಗುತ್ತದೆ. ಯುದ್ಧ ಮತ್ತು ಹಿಂಸಾಚಾರಗಳು ಜನರ ಆಹಾರ, ನೀರು ಮತ್ತು ಶಿಕ್ಷಣದ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ. ಉಕ್ರೇನ್ ಯುದ್ಧದಲ್ಲಿ 12,600ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ. ಆಂತರಿಕ ಸಂಷರ್ಘದಿಂದ ಸುಡಾನ್, ಕಾಂಗೋ ಜರ್ಝರಿತಗೊಂಡಿವೆ. ಗಾಝಾದಲ್ಲಿ ದ್ವೇಷ, ಹಿಂಸಾಚಾರ ಮರುಕಳಿಸಲು ಆಸ್ಪದ ನೀಡಬಾರದು. ಶಾಶ್ವತ ಕದನ ವಿರಾಮ, ಉಳಿದ ಒತ್ತೆಯಾಳುಗಳನ್ನು ಗೌರವಯುತ ರೀತಿಯಲ್ಲಿ ಬಿಡುಗಡೆಗೊಳಿಸುವುದು, ಎರಡು ರಾಷ್ಟ್ರ ಪರಿಹಾರ ಸೂತ್ರದತ್ತ ಪ್ರಗತಿ, ಆಕ್ರಮಣದ ಅಂತ್ಯ ಮತ್ತು ಗಾಝಾವನ್ನು ಅವಿಭಾಜ್ಯ ಅಂಗವಾಗಿ ಹೊಂದಿರುವ ಸ್ವತಂತ್ರ ಫೆಲೆಸ್ತೀನಿಯನ್ ರಾಷ್ಟ್ರ ಸ್ಥಾಪನೆಗೆ ಇದು ಸಕಾಲವಾಗಿದೆ ಎಂದು ಗುಟೆರಸ್ ಹೇಳಿದ್ದಾರೆ.