ಚಾರ್ಲಿ ಕರ್ಕ್ ಹತ್ಯೆ ಪ್ರಕರಣ: ಬಂಧಿತ ಆರೋಪಿ ಟೈಲರ್ ರಾಬಿನ್ಸನ್ ಯಾರು?
ಚಾರ್ಲಿ ಕರ್ಕ್ / ಟೈಲರ್ ರಾಬಿನ್ಸನ್ (Photo credit:PTI,X/@piersmorgan)
ಉತಾಹ್: ಕನ್ಸರ್ವೇಟಿವ್ ರಾಜಕೀಯ ಯುವ ನಾಯಕ ಚಾರ್ಲಿ ಕರ್ಕ್ ಹತ್ಯೆ ಪ್ರಕರಣದಲ್ಲಿ ಉತಾಹ್ ಮೂಲದ ಕೇವಲ 22 ವರ್ಷದ ಟೈಲರ್ ರಾಬಿನ್ಸನ್ ನನ್ನು ಪೊಲೀಸರು ಬಂಧಿಸಿದ್ದಾರೆ. ರಾಬಿನ್ಸನ್, ಸೆ. 9ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಕಟ್ಟಡದ ಮೇಲ್ಚಾವಣಿಯಿಂದ ರೈಫಲ್ ದಾಳಿ ನಡೆಸಿ ಕರ್ಕ್ ಅವರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.
ಆತನ ತಂದೆ ಮ್ಯಾಟ್ ರಾಬಿನ್ಸನ್ ಅವರೇ ಟಿವಿಯಲ್ಲಿ ಫೋಟೊ ನೋಡಿ ಪುತ್ರನ ಬಗ್ಗೆ ಸಂಶಯಗೊಂಡು ಆತನಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ತಾನೇ ಆ ಕೃತ್ಯ ಎಸಗಿರುವ ಬಗ್ಗೆ ಹೇಳಿದ ಟೈಲರ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದಾನೆ. ಕೊನೆಗೆ ಪುತ್ರನ ಮನ ಒಲಿಸಿ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದಾರೆ.
ಮ್ಯಾಟ್ ರಾಬಿನ್ಸನ್ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಎಂದು ಮೊದಲು ಹೇಳಲಾಗಿತ್ತು. ಆದರೆ ಅದು ತಪ್ಪು ಮಾಹಿತಿ, ಅವರು ನಿರ್ಮಾಣ ಸಂಸ್ಥೆಯೊಂದರಲ್ಲಿ ಉದ್ಯೋಗಿ ಎಂದು ತಿಳಿದು ಬಂದಿದೆ
ಈ ಘಟನೆ ಅಮೆರಿಕದಲ್ಲಿ ಹೆಚ್ಚುತ್ತಿರುವ ರಾಜಕೀಯ ಹಿಂಸಾಚಾರದ ಬಗ್ಗೆ ಗಂಭೀರ ಆತಂಕ ಮೂಡಿಸಿದೆ.
2021ರಲ್ಲಿ ಪೈನ್ ವ್ಯೂ ಹೈಸ್ಕೂಲ್ ನಿಂದ ಪದವಿ ಪಡೆದ ರಾಬಿನ್ಸನ್, ಅಮೇರಿಕನ್ ಕಾಲೇಜ್ ಟೆಸ್ಟಿಂಗ್ ಪ್ರವೇಶ ಪರೀಕ್ಷೆಯಲ್ಲಿ 34 ಅಂಕಗಳನ್ನು ಗಳಿಸಿ ರಾಷ್ಟ್ರದ ಅಗ್ರ ಶೇ.1 ವಿದ್ಯಾರ್ಥಿಗಳಲ್ಲಿ ಸ್ಥಾನ ಪಡೆದಿದ್ದ. ಈ ಸಾಧನೆಗಾಗಿ ಉತಾಹ್ ಸ್ಟೇಟ್ ಯೂನಿವರ್ಸಿಟಿಯಿಂದ ನಾಲ್ಕು ವರ್ಷದ ವಿದ್ಯಾರ್ಥಿವೇತನ ಪಡೆದ ರಾಬಿನ್ಸನ್, ಭವಿಷ್ಯದ ಭರವಸೆಯ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟಿದ್ದ. ಆ ಸಂದರ್ಭದಲ್ಲಿ ಆತನ ತಾಯಿ ಸಂಭ್ರಮದಿಂದ ಪೋಸ್ಟ್ ಮಾಡಿದ್ದ ವಿಡಿಯೋ ಕೂಡ ಆನ್ ಲೈನ್ ನಲ್ಲಿದೆ.
ಆದರೆ, ವಿಶ್ವವಿದ್ಯಾಲಯದಲ್ಲಿ ಕೇವಲ ಒಂದು ಸೆಮಿಸ್ಟರ್ ಓದಿದ ಬಳಿಕ ಅವರು ಹೊರಬಂದ. ನಂತರ ಡಿಕ್ಸಿ ತಾಂತ್ರಿಕ ಕಾಲೇಜುಯ ಎಲೆಕ್ಟ್ರಿಕಲ್ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮದಡಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ತನಿಖಾಧಿಕಾರಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ರಾಬಿನ್ಸನ್ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಆತ ಕರ್ಕ್ ಅವರ ನಿಗದಿತ ಕಾರ್ಯಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಂದು ಕುಟುಂಬ ಸದಸ್ಯರ ಹೇಳಿಕೆಗಳಿಂದ ತಿಳಿದುಬಂದಿದೆ. ದಾಳಿಯಲ್ಲಿ ಬಳಸಿದ ಗುಂಡುಗಳಲ್ಲಿ ಫ್ಯಾಸಿಸ್ಟ್ ವಿರೋಧಿ ಸಂದೇಶಗಳನ್ನು ಕೆತ್ತಲಾಗಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ.
ರಾಬಿನ್ಸನ್ ನೋಂದಾಯಿತ ಮತದಾರನಾಗಿದ್ದ. ಆದರೆ ಅಮೇರಿಕದಲ್ಲಿ ಸಾಮಾನ್ಯವಾಗಿರುವಂತೆ ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿರಲಿಲ್ಲ. ಆತ ನಿಷ್ಕ್ರಿಯ ಮತದಾರರ ಪಟ್ಟಿಯಲ್ಲಿದ್ದ. ಕಳೆದ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿರಲಿಲ್ಲ.
ಅಮೆರಿಕದ ದಾಖಲೆಗಳ ಪ್ರಕಾರ, ರಾಬಿನ್ಸನ್ ಗೆ ಯಾವುದೇ ಕ್ರಿಮಿನಲ್ ಇತಿಹಾಸವಿಲ್ಲ. ಆತ ನೋಂದಾಯಿತ ಮತದಾರರಾಗಿದ್ದರೂ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರಲಿಲ್ಲ ಮತ್ತು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿರಲಿಲ್ಲ. ರಾಬಿನ್ಸನ್ ಪೋಷಕರೊಂದಿಗೆ ವಾಷಿಂಗ್ಟನ್ ಪಟ್ಟಣದಲ್ಲಿ ವಾಸಿಸುತ್ತಿದ್ದ.
ಗುಂಡಿನ ದಾಳಿಯ ಬಳಿಕ 33 ಗಂಟೆಗಳ ಕಾರ್ಯಾಚರಣೆ ನಡೆಸಿ, ಸೆ. 11ರ ರಾತ್ರಿ ರಾಬಿನ್ಸನ್ ನನ್ನು ಬಂಧಿಸಲಾಯಿತು. ದಾಳಿಗೆ ಬಳಸಿದ ಡಾಡ್ಜ್ ಚಾಲೆಂಜರ್ ಕಾರು ಕೂಡ ವಶಪಡಿಸಿಕೊಳ್ಳಲಾಗಿದೆ. ರಾಬಿನ್ಸನ್ ನನ್ನು ಪ್ರಸ್ತುತ ಉತಾಹ್ ಕೌಂಟಿ ಜೈಲ್ ಗೆ ದಾಖಲಿಸಲಾಗಿದೆ.
ಟೈಲರ್ ರಾಬಿನ್ಸನ್ ಗೆ ಮರಣ ದಂಡನೆ ಕೊಡಲಾಗುವುದು ಎಂದು ಟ್ರಂಪ್ ಸ್ವತಃ ಹೇಳಿದ್ದಾರೆ. ಇತರ ಹಿರಿಯ ನಾಯಕರೂ ಆತನಿಗೆ ಮರಣ ದಂಡನೆಯೇ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ
ಈ ಹತ್ಯೆ ಅಮೆರಿಕಾದಲ್ಲಿ ರಾಜಕೀಯ ಅತಿರೇಕ ಮತ್ತು ಹಿಂಸಾಚಾರದ ಬೆಳವಣಿಗೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆಯ ಬಳಿಕ ರಾಷ್ಟ್ರವ್ಯಾಪಿ ಶಾಂತಿಗೆ ಕರೆ ನೀಡಿದ್ದಾರೆ.