×
Ad

ಬೈಡನ್ ಆಡಳಿತದ ಇಸ್ರೇಲ್-ಫೆಲೆಸ್ತೀನ್ ನೀತಿ ಕುರಿತು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ವ್ಯಾಪಕ ಆಂತರಿಕ ಅಸಮಾಧಾನ: ವರದಿ

Update: 2023-10-20 16:56 IST

 Photo: X/@WhiteHouse

ಹೊಸದಿಲ್ಲಿ: ಜೋ ಬೈಡನ್ ಆಡಳಿತದ ಇಸ್ರೇಲ್-ಫೆಲೆಸ್ತೀನ್ ನೀತಿಯ ಕುರಿತು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೋರ್ವರು ತನ್ನ ಅಸಂತೋಷವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರೆ, ಇಲಾಖೆಯಲ್ಲಿನ ಇತರರಲ್ಲಿಯೂ ಅಸಮಾಧಾನದ ಭಾವನೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

ತಮ್ಮ ಸಲಹೆಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮತ್ತು ಅವರ ಹಿರಿಯ ಸಲಹೆಗಾರರು ಕಡೆಗಣಿಸುತ್ತಿದ್ದಾರೆ ಎಂದು ಇಲಾಖೆಯಲ್ಲಿನ ತಜ್ಞರು ಭಾವಿಸಿದ್ದಾರೆ. ಇಲಾಖೆಯಲ್ಲಿ ವ್ಯಾಪಕ ಆಂತರಿಕ ಅಸಮಾಧಾನವಿದೆ ಎನ್ನಲಾಗಿದೆ ಎಂದು HuffPost ವರದಿ ಮಾಡಿದೆ.

ಪ್ರಾಥಮಿಕವಾಗಿ ಸರಕಾರದ ಎಲ್ಲ ಹಂತಗಳಲ್ಲಿಯೂ ಬಂಡಾಯವಿದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಹಮಾಸ್ ಹೋರಾಟಗಾರರನ್ನು ಹೊರದಬ್ಬಲು ಗಾಝಾದ ಮೇಲೆ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಬೈಡನ್ ಮತ್ತು ಬ್ಲಿಂಕೆನ್ ಇಬ್ಬರೂ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ರಾಜತಾಂತ್ರಿಕರು ‘ಡಿಸೆಂಟ್ ಕೇಬಲ್’ಎಂದು ಕರೆಯಲಾಗುವ, ಅಮೆರಿಕದ ನೀತಿಯನ್ನು ಟೀಕಿಸುವ ದಾಖಲೆಯನ್ನು ಸಿದ್ಧಪಡಿಸುತ್ತಿದ್ದು, ಅದು ಸಂರಕ್ಷಿತ ಆಂತರಿಕ ಚಾನೆಲ್ ಮೂಲಕ ಏಜೆನ್ಸಿಯ ನಾಯಕರಿಗೆ ರವಾನೆಯಾಗುತ್ತದೆ ಎಂದು ಇಬ್ಬರು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು. ಗಂಭೀರ ಭಿನ್ನಾಭಿಪ್ರಾಯಗಳಿದ್ದಾಗ ಮಾತ್ರ ಇಂತಹ ಕೇಬಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅವುಗಳನ್ನು ಸಾಂದರ್ಭಿಕ ಎಂದು ಪರಿಗಣಿಸಲಾಗುತ್ತದೆ. ವಿಯೆಟ್ನಾಂ ಯುದ್ಧದ ಸಂದರ್ಭಗಳಲ್ಲಿ ಇಂತಹ ಕೇಬಲ್‌ಗಳನ್ನು ಮೊದಲ ಬಾರಿಗೆ ಸಿದ್ಧಗೊಳಿಸಲಾಗಿತ್ತು.

ಈ ವಾರದ ಆರಂಭದಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ಜೋಶ್ ಪಾಲ್ ಅವರು ಇಸ್ರೇಲ್ ಮತ್ತು ಫೆಲೆಸ್ತೀನ್‌ಗಳಲ್ಲಿಯ ಪರಿಸ್ಥಿತಿಗೆ ಬಿಡೆನ್ ಆಡಳಿತದ ಪ್ರತಿಕ್ರಿಯೆಯನ್ನು ವಿರೋಧಿಸಿ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

‘ಇಸ್ರೇಲ್‌ಗೆ ನಮ್ಮ (ಅಮೆರಿಕ ಸರಕಾರ) ಮಾರಣಾಂತಿಕ ನೆರವಿನ ಮುಂದುವರಿಕೆಗೆ ಸಂಬಂಧಿಸಿದಂತೆ ನೀತಿ ಭಿನ್ನಾಭಿಪ್ರಾಯ ನನ್ನ ನಿರ್ಧಾರಕ್ಕೆ ಕಾರಣವಾಗಿದೆ’ ಎಂದು ಅವರು ತನ್ನ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News