×
Ad

ಒಂಟಿತನದಿಂದ ಪ್ರತಿ ಗಂಟೆಗೆ 100 ಮಂದಿ ಸಾವನ್ನಪ್ಪುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ

Update: 2025-07-01 17:33 IST

PC : @WHO 

ಹೊಸದಿಲ್ಲಿ: ಕಳವಳಕಾರಿ ಬೆಳವಣಿಗೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯುಎಚ್‌ಒ)ಯು ಒಂಟಿತನವು ಪ್ರತಿ ಗಂಟೆಗೆ ಸುಮಾರು 100 ಸಾವುಗಳಿಗೆ ಕಾರಣ ಎನ್ನುವುದನ್ನು ಬಹಿರಂಗಗೊಳಿಸಿದ್ದು, ವಾರ್ಷಿಕವಾಗಿ 8,71,000ಕ್ಕೂ ಅಧಿಕ ಸಾವುಗಳು ಇದರಿಂದ ಸಂಭವಿಸುತ್ತಿವೆ.

ಒಂಟಿತನವು ಪ್ರಮುಖ ಜಾಗತಿಕ ಸಾರ್ವಜನಿಕ ಆರೋಗ್ಯ ಕಳವಳವಾಗಿದೆ ಎಂದು ತನ್ನ ಜಾಗತಿಕ ವರದಿಯಲ್ಲಿ ಒತ್ತಿ ಹೇಳಿರುವ ಸಾಮಾಜಿಕ ಸಂಪರ್ಕ ಕುರಿತು ಡಬ್ಲ್ಯುಎಚ್‌ಒ ಆಯೋಗವು, ಬಲವಾದ ಸಾರ್ವಜನಿಕ ಸಂಪರ್ಕಗಳು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಕಾರಣವಾಗಬಲ್ಲವು ಎಂದು ಬೆಟ್ಟು ಮಾಡಿದೆ.

ವರದಿಯ ಪ್ರಕಾರ, ಜಾಗತಿಕವಾಗಿ ಪ್ರತಿ ಆರು ಜನರಲ್ಲಿ ಓರ್ವರು ಒಂಟಿತನದಿಂದ ಬಳಲುತ್ತಿದ್ದು, ಇದು ಎಲ್ಲ ವಯೋಗುಂಪುಗಳನ್ನೂ ಕಾಡುತ್ತಿದೆ. ವಿಶೇಷವಾಗಿ ಯುವಜನರಲ್ಲಿ ಹಾಗೂ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ. ಕಡಿಮೆ ಆದಾಯದ ದೇಶಗಳಲ್ಲಿ ಶೇ.24ರಷ್ಟು ಜನರು ಒಂಟಿತನವನ್ನು ಅನುಭವಿಸುತ್ತಿದ್ದು, ಇದು ಹೆಚ್ಚಿನ ಆದಾಯದ ದೇಶಗಳಿಗೆ (ಶೇ.ಸುಮಾರು 11) ಹೋಲಿಸಿದರೆ ಎರಡು ಪಟ್ಟು ಹೆಚ್ಚಿದೆ.

ಸಂಪರ್ಕಗಳನ್ನು ಸಾಧಿಸಲು ಅಂತ್ಯವಿಲ್ಲದ ಸಾಧ್ಯತೆಗಳಿರುವ ಈ ಯುಗದಲ್ಲಿ ಹೆಚ್ಚೆಚ್ಚು ಜನರು ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಡಾ.ಟೆಡ್ರಸ್ ಅಧನಮ್ ಘೆಬ್ರಿಯೆಸಸ್ ಅವರು, ಒಂಟಿತನದಿಂದ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳಿಗೆ ಉಂಟಾಗುವ ಹಾನಿಯಲ್ಲದೆ, ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಯ ಸಮಸ್ಯೆಯನ್ನು ಬಗೆಹರಿಸದಿದ್ದರೆ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೋಟ್ಯಂತರ ಡಾಲರ್ ಗಳಷ್ಟು ವೆಚ್ಚವು ಮುಂದುವರಿಯಲಿದೆ ಎಂದರು.

ವಯಸ್ಸಾದ ವ್ಯಕ್ತಿಗಳು ಸಹ ಒಂಟಿತನದ ಅಪಾಯವನ್ನು ಎದುರಿಸುತ್ತಿದ್ದು,‌ ಸಾಮಾಜಿಕ ಪ್ರತ್ಯೇಕತೆಯು ಜಾಗತಿಕವಾಗಿ ಪ್ರತಿ ಮೂವರು ಹಿರಿಯ ವ್ಯಕ್ತಿಗಳಲ್ಲಿ ಒಬ್ಬರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅಂದಾಜಿಸಲಾಗಿದೆ. ದೈಹಿಕ ವೈಕಲ್ಯ ಹೊಂದಿರುವ ವ್ಯಕ್ತಿಗಳು,ನಿರಾಶ್ರಿತರು,ವಲಸಿಗರು, ಐಉಃಖಿಕಿ+ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು,ಮೂಲನಿವಾಸಿಗಳು ಮತ್ತು ಜನಾಂಗೀಯ ಅಲ್ಪಸಂಖ್ಯಾತರಂತಹ ದುರ್ಬಲ ಗುಂಪುಗಳು ಸಾಮಾಜಿಕ ಸಂಪರ್ಕವನ್ನು ಕಠಿಣಗೊಳಿಸುವ ತಾರತಮ್ಯ ಅಥವಾ ಹೆಚ್ಚುವರಿ ಅಡೆತಡೆಗಳನ್ನು ಎದುರಿಸಬಹುದು ಎಂದು ವರದಿಯು ಹೇಳಿದೆ.

‘ಒಂಟಿತನ ಮತ್ತು ಪ್ರತ್ಯೇಕತೆಯು ನಮ್ಮ ಕಾಲದ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದಾಗಿರುವುದನ್ನು ವರದಿಯು ಬಹಿರಂಗಗೊಳಿಸಿದೆ ’ ಎಂದು ಎತ್ತಿ ತೋರಿಸಿದ ಡಬ್ಲ್ಯುಎಚ್‌ಒ ಆಯೋಗದ ಸಾಮಾಜಿಕ ಸಂಪರ್ಕ ಕುರಿತು ಸಹಅಧ್ಯಕ್ಷ ಹಾಗೂ ಅಮೆರಿಕದ ಮಾಜಿ ಸರ್ಜನ್ ಜನರಲ್ ಡಾ.ವಿವೇಕ ಮೂರ್ತಿ ಅವರು,‘ನಾವು ಹೇಗೆ ಹೆಚ್ಚು ಸಂಪರ್ಕಿತ ಬದುಕುಗಳನ್ನು ರೂಪಿಸಬಹುದು ಎನ್ನುವುದಕ್ಕೆ ನಮ್ಮ ಆಯೋಗವು ಮಾರ್ಗಸೂಚಿಯನ್ನು ಒದಗಿಸುತ್ತದೆ ಮತ್ತು ಆರೋಗ್ಯ,ಶಿಕ್ಷಣ ಹಾಗೂ ಆರ್ಥಿಕ ಫಲಿತಾಂಶಗಳ ಮೇಲೆ ಇದರ ಗಾಢ ಪರಿಣಾಮವನ್ನು ಒತ್ತಿ ಹೇಳುತ್ತದೆ ’ಎಂದರು.

ವರದಿಯು ಕಳಪೆ ಆರೋಗ್ಯ, ಕಡಿಮೆ ಆದಾಯ, ಸೀಮಿತ ಶಿಕ್ಷಣ,ಒಂಟಿಯಾಗಿ ವಾಸ ಮತ್ತು ಅಸಮರ್ಪಕ ಸಮುದಾಯ ಮೂಲಸೌಕರ್ಯ ಸೇರಿದಂತೆ ಒಂಟಿತನ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಹಲವು ಕಾರಣಗಳನ್ನು ಗುರುತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News