×
Ad

ಯೆಮನ್ | ಗ್ಯಾಸ್ ಸ್ಟೇಷನ್‍ನಲ್ಲಿ ಸ್ಫೋಟ: 15 ಮಂದಿ ಮೃತ್ಯು ; 70 ಮಂದಿಗೆ ಗಾಯ

Update: 2025-01-12 22:24 IST

ಸಾಂದರ್ಭಿಕ ಚಿತ್ರ | PC : PTI

ಸನಾ: ಮಧ್ಯ ಯೆಮನ್‍ನ ಗ್ಯಾಸ್ ಸ್ಟೇಷನ್‍ನಲ್ಲಿ ಸಂಭವಿಸಿದ ಭಾರೀ ಸ್ಫೋಟದ ಬಳಿಕ ಕ್ಷಿಪ್ರಗತಿಯಲ್ಲಿ ಹರಡಿದ ಬೆಂಕಿಯಿಂದ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಸುಮಾರು 70 ಮಂದಿ ಗಾಯಗೊಂಡಿರುವುದಾಗಿ ಯೆಮನ್‍ನ ಆರೋಗ್ಯ ಇಲಾಖೆಯ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಬಯ್ದಾ ಪ್ರಾಂತದ ಝಹೆರ್ ಜಿಲ್ಲೆಯಲ್ಲಿನ ಗ್ಯಾಸ್ ಸ್ಟೇಷನ್‍ನಲ್ಲಿ ಸ್ಫೋಟ ಸಂಭವಿಸಿದ್ದು ಗಾಯಾಳುಗಳಲ್ಲಿ 40 ಮಂದಿಯ ಸ್ಥಿತಿ ಗಂಭೀರವಾಗಿದೆ. ಹಲವರು ನಾಪತ್ತೆಯಾಗಿರುವ ಮಾಹಿತಿಯಿದ್ದು ಶೋಧ ಕಾರ್ಯ ಮುಂದುವರಿದಿದೆ. ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಹೌದಿ ಬಂಡುಗೋರ ಪಡೆಯ ನಿಯಂತ್ರಣದಲ್ಲಿರುವ ಆರೋಗ್ಯ ಇಲಾಖೆ ಹೇಳಿದೆ.

ಗ್ಯಾಸ್ ಸ್ಟೇಷನ್‍ನಲ್ಲಿ ಭಾರೀ ಸ್ಫೋಟದ ಬಳಿಕ ಬೆಂಕಿಯ ಕೆನ್ನಾಲಗೆ ಆಗಸಕ್ಕೆ ವ್ಯಾಪಿಸಿರುವ ಮತ್ತು ಹಲವು ವಾಹನಗಳು ಬೆಂಕಿಯಲ್ಲಿ ಉರಿಯುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬಯ್ದಾ ಪ್ರಾಂತವು ಇರಾನ್ ಬೆಂಬಲಿತ ಹೌದಿ ಬಂಡುಕೋರ ಗುಂಪಿನ ನಿಯಂತ್ರಣದಲ್ಲಿದೆ. ಹೌದಿಗಳು ಒಂದು ದಶಕಕ್ಕಿಂತಲೂ ಹೆಚ್ಚಿನ ಸಮಯದಿಂದ ಯೆಮನ್‍ನ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ವಿರುದ್ಧ ಯುದ್ಧ ನಡೆಸುತ್ತಿದ್ದಾರೆ. 2014ರಲ್ಲಿ ಹೌದಿಗಳು ಯೆಮನ್ ರಾಜಧಾನಿ ಸನಾವನ್ನು ವಶಕ್ಕೆ ಪಡೆದು ಉತ್ತರದ ಹಲವು ಪ್ರಾಂತಗಳನ್ನು ನಿಯಂತ್ರಣಕ್ಕೆ ಪಡೆದ ಬಳಿಕ ಯೆಮನ್ ಸರಕಾರ ದಕ್ಷಿಣಕ್ಕೆ ಸ್ಥಳಾಂತರಗೊಂಡಿದೆ.

ಯೆಮನ್‍ ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ನೇತೃತ್ವದ ಮೈತ್ರಿ ಪಡೆ 2015ರ ಮಾರ್ಚ್‍ನಲ್ಲಿ ಯುದ್ಧಕ್ಷೇತ್ರವನ್ನು ಪ್ರವೇಶಿಸಿದೆ. ಈ ಯುದ್ಧದಿಂದಾಗಿ ನಾಗರಿಕರು ಮತ್ತು ಯೋಧರು ಸೇರಿದಂತೆ 1,50,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News