ಆಡಳಿತದ ವೈಫಲ್ಯಗಳ ಬಗ್ಗೆ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ: ಗಡೀಪಾರು ಬೆದರಿಕೆ ಹಾಕಿದ ಟ್ರಂಪ್ ವಿರುದ್ಧ ಝೋಹ್ರಾನ್ ಮಮ್ದಾನಿ ವಾಗ್ದಾಳಿ
ಝೊಹ್ರಾನ್ ಮಮ್ದಾನಿ / ಡೊನಾಲ್ಡ್ ಟ್ರಂಪ್ (Photo credit: X/@ZohranKMamdani, PTI)
ನ್ಯೂಯಾರ್ಕ್ : ನ್ಯೂಯಾರ್ಕ್ ಮೇಯರ್ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತೀಯ ಮೂಲದ ಝೋಹ್ರಾನ್ ಮಮ್ದಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗಡೀಪಾರು, ಬಂಧನದ ಬೆದರಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟ್ರಂಪ್ ಅವರು ವಿಭಜನೆಗೆ ಪ್ರಚೋದಿಸುತ್ತಿದ್ದಾರೆ. ತನ್ನ ಆಡಳಿತದ ವೈಫಲ್ಯಗಳ ಬಗ್ಗೆ ಕಾರ್ಮಿಕ ವರ್ಗದ ಅಮೆರಿಕನ್ನರ ಗಮನವನ್ನು ಬೇರೆಡೆಗೆ ಸೆಳೆಯಲು ವೈಯಕ್ತಿಕ ದಾಳಿಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಝೋಹ್ರಾನ್ ಮಮ್ದಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ʼನಾನು ಯಾವುದೇ ಕಾರಣಕ್ಕೆ ಹಿಂದೆ ಸರಿಯುವುದಿಲ್ಲʼ ಎಂದು ಪ್ರತಿಜ್ಞೆ ಮಾಡಿದರು. ಭಿನ್ನಾಭಿಪ್ರಾಯವನ್ನು ಅಡಗಿಸುವ ರಿಪಬ್ಲಿಕನ್ ಪಕ್ಷದ ಪ್ರಯತ್ನಗಳ ವಿರುದ್ಧ ತನ್ನ ಕೆಲಸವನ್ನು ಮುಂದುವರಿಸುತ್ತೇನೆ ಮತ್ತು ಪ್ರತಿ ಹೋರಾಟವನ್ನು ಮಾಡುತ್ತೇನೆ ಎಂದು ಘೋಷಿಸಿದರು.
ʼನಿನ್ನೆ, ಡೊನಾಲ್ಡ್ ಟ್ರಂಪ್ ನನ್ನನ್ನು ಬಂಧಿಸಬೇಕು, ನನ್ನನ್ನು ಗಡೀಪಾರು ಮಾಡಬೇಕು , ನನ್ನನ್ನು ಅಸ್ವಾಭಾವಿಕವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿದರುʼ ಎಂದು ನ್ಯೂಯಾರ್ಕ್‌ನ ಹೋಟೆಲ್ ಆಂಡ್ ಗೇಮಿಂಗ್ ಟ್ರೇಡ್ಸ್ ಕೌನ್ಸಿಲ್ ಪ್ರಧಾನ ಕಚೇರಿಯಲ್ಲಿ ನಡೆದ ರ್ಯಾಲಿಯಲ್ಲಿ ಝೋಹ್ರಾನ್ ಮಮ್ದಾನಿ ಹೇಳಿದ್ದಾರೆ.
ʼನಾನು ಯಾರು? ನಾನು ಎಲ್ಲಿಂದ ಬಂದಿದ್ದೇನೆ? ಹೇಗೆ ಕಾಣುತ್ತೇನೆ ಅಥವಾ ಹೇಗೆ ಮಾತನಾಡುತ್ತೇನೆ ಎಂಬುದಕ್ಕಿಂತ, ನಾನು ಯಾವುದಕ್ಕಾಗಿ ಹೋರಾಡುತ್ತೇನೆ ಎಂಬುದರಿಂದ ಅವರು ಗಮನವನ್ನು ಬೇರೆಡೆಗೆ ಸೆಳೆಯಲು ಬಯಸುತ್ತಾರೆ. ನಾನು ದುಡಿಯುವ ಜನರಿಗಾಗಿ ಹೋರಾಡುತ್ತೇನೆʼ ಎಂದು ಮಮ್ದಾನಿ ಹೇಳಿದರು.
ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಮಮ್ದಾನಿ ಆಯ್ಕೆ ಬಳಿಕ ಅವರ ವಿರುದ್ಧ ಟ್ರಂಪ್ ಹಲವು ಬಾರಿ ವೈಯಕ್ತಿಕ ದಾಳಿಗಳನ್ನು ನಡೆಸಿದ್ದಾರೆ. ಅವರನ್ನು ಕಮ್ಯುನಿಸ್ಟ್ ಮತ್ತು ಅವಿವೇಕಿ ಎಂದು ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಮಮ್ದಾನಿ, ನ್ಯೂಯಾರ್ಕ್ ನಗರದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕಾರ್ಮಿಕ ವರ್ಗದ ಅಮೆರಿಕನ್ನರನ್ನು ಅವರು ಹೇಗೆ ನಿರಾಸೆಗೊಳಿಸಿದ್ದಾರೆಂದು ಒಪ್ಪಿಕೊಳ್ಳುವ ಬದಲು ಟ್ರಂಪ್ ವಿಭಜನೆ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.