ಡೊನಾಲ್ಡ್ ಟ್ರಂಪ್‌ಗೆ ನ್ಯೂಯಾರ್ಕ್‌ನ ನೂತನ ಮೇಯರ್ ಝೊಹ್ರಾನ್ ಮಮ್ದಾನಿಯವರ ನಾಲ್ಕು ಪದಗಳ ಸಂದೇಶ ಏನು?
ಝೊಹ್ರಾನ್ ಮಮ್ದಾನಿ (Photo: PTI)
ನ್ಯೂಯಾರ್ಕ್: ಡೆಮಾಕ್ರಟಿಕ್ ನಾಯಕ ಝೊಹ್ರಾನ್ ಮಮ್ದಾನಿಯವರು ನ್ಯೂಯಾರ್ಕ್‌ನ ನೂತನ ಮೇಯರ್ ಆಗಿ ಆಯ್ಕೆಯಾದ ಬೆನ್ನಿಗೇ ತನ್ನ ನಾಯಕತ್ವದ ಧೋರಣೆಯನ್ನು ಸ್ಪಷ್ಟಪಡಿಸಿದ್ದಾರೆ. ಪ್ರಖರ ವಿಜಯ ಭಾಷಣ ಮಾಡಿದ ಮಮ್ದಾನಿ ನ್ಯೂಯಾರ್ಕ್ ಮತ್ತೊಮ್ಮೆ ದ್ವೇಷ ಮತ್ತು ಅಸಮಾನತೆಯ ವಿರುದ್ಧ ದೇಶವನ್ನು ಮುನ್ನಡೆಸಲಿದೆ ಎಂದು ಘೋಷಿಸುವ ಮೂಲಕ ಸುಧಾರಣೆಯ ಭರವಸೆಗಳೊಂದಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರ ಸವಾಲುಗಳನ್ನು ಒಡ್ಡಿದರು.
‘ಡೊನಾಲ್ಡ್ ಟ್ರಂಪ್, ನೀವು ನೋಡುತ್ತಿದ್ದೀರಿ ಎನ್ನುವುದು ನನಗೆ ತಿಳಿದಿದೆ. ಹೀಗಾಗಿ ನಿಮಗಾಗಿ ನಾಲ್ಕು ಪದಗಳು ನನ್ನಲ್ಲಿವೆ: ʼಟರ್ನ್ ದಿ ವಾಲ್ಯೂಮ್ ಅಪ್ʼ (ಧ್ವನಿಯನ್ನು ಹೆಚ್ಚಿಸಿ)’ ಎಂದು ಮಮ್ದಾನಿ ಗಡಚಿಕ್ಕುವ ಹರ್ಷೋದ್ಗಾರಗಳ ನಡುವೆ ಘೋಷಿಸಿದರು. ‘ಕೆಟ್ಟ ಮನೆಮಾಲಿಕರನ್ನು’ ಹೊಣೆಗಾರರನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಅವರು,ನಗರದಾದ್ಯಂತ ಬಾಡಿಗೆಯನ್ನು ನಿಯಂತ್ರಿಸುವ ತನ್ನ ಯೋಜನೆಯನ್ನು ಪ್ರಕಟಿಸಿದರು. ‘ನಮ್ಮ ನಗರದ ಡೊನಾಲ್ಡ್ ಟ್ರಂಪ್‌ಗಳು ತಮ್ಮ ಬಾಡಿಗೆದಾರರನ್ನು ಶೋಷಿಸುವ ಮೂಲಕ ತುಂಬ ಆರಾಮವಾಗಿದ್ದಾರೆ. ಟ್ರಂಪ್‌ರಂತಹ ಬಿಲಿಯಾಧೀಶರು ತೆರಿಗೆಯನ್ನು ತಪ್ಪಿಸಲು ಮತ್ತು ತೆರಿಗೆ ವಿರಾಮಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿರುವ ಭ್ರಷ್ಟಾಚಾರದ ಸಂಸ್ಕೃತಿಗೆ ನಾವು ಅಂತ್ಯ ಹಾಡುತ್ತೇವೆ’ ಎಂದೂ ಮಮ್ದಾನಿ ಹೇಳಿದರು.
ತನ್ನನ್ನು ಪ್ರಜಾಸತ್ತಾತ್ಮಕ ಸಮಾಜವಾದಿ ಎಂದು ಹೇಳಿಕೊಳ್ಳುವ ಮಮ್ದಾನಿ ತನ್ನ ಭಾಷಣವನ್ನು ಕಾರ್ಮಿಕ ಹಕ್ಕುಗಳು ಮತ್ತು ಆರ್ಥಿಕ ನ್ಯಾಯದ ಮೇಲೂ ಕೇಂದ್ರೀಕರಿಸಿದರು. ‘ನಾವು ಕಾರ್ಮಿಕ ಒಕ್ಕೂಟಗಳೊಂದಿಗೆ ನಿಲ್ಲುತ್ತೇವೆ ಮತ್ತು ಕಾರ್ಮಿಕ ರಕ್ಷಣೆಗಳನ್ನು ವಿಸ್ತರಿಸುತ್ತೇವೆ’ ಎಂದು ಹೇಳಿದ ಅವರು,‘ಏಕೆಂದರೆ ಡೊನಾಲ್ಡ್ ಟ್ರಂಪ್‌ರಂತೆ ದುಡಿಯುವ ಜನರಿಗೆ ಸುಭದ್ರ ಹಕ್ಕುಗಳಿರುವಾಗ ಅವರನ್ನು ಶೋಷಿಸಲು ಪ್ರಯತ್ನಿಸುವ ಮೇಲಧಿಕಾರಿಗಳು ನಿಜಕ್ಕೂ ತುಂಬ ಸಣ್ಣವರಾಗುತ್ತಾರೆ ಎನ್ನುವುದು ನಮಗೆ ತಿಳಿದಿದೆ’ ಎಂದರು.
ಟ್ರಂಪ್ ಅವರ ಕಠಿಣ ವಲಸೆ ನೀತಿಗಳನ್ನು ನೇರವಾಗಿ ಟೀಕಿಸಿದ ಮಮ್ದಾನಿ, ‘ನ್ಯೂಯಾರ್ಕ್ ವಲಸಿಗರ ನಗರವಾಗಿದೆ, ವಲಸಿಗರಿಂದ ನಿರ್ಮಿಸಲ್ಪಟ್ಟಿದೆ,ವಲಸಿಗರಿಂದ ಚಾಲಿತವಾಗಿದೆ ಮತ್ತು ಈಗ ಓರ್ವ ವಲಸಿಗನ ನೇತೃತ್ವದಲ್ಲಿದೆ’ ಎಂದು ಘೋಷಿಸಿದರು. ‘ಹೀಗಾಗಿ ನಾನು ಹೇಳುವುದನ್ನು ಕೇಳಿ ಅಧ್ಯಕ್ಷ ಟ್ರಂಪ್,ನೀವು ನಮ್ಮಲ್ಲಿ ಯಾರನ್ನಾದರೂ ಗುರಿಯಾಗಿಸಿಕೊಳ್ಳಲು ಬಯಸಿದರೆ ನೀವು ನಮ್ಮ ಇಡೀ ಗುಂಪನ್ನು ಎದುರಿಸಬೇಕಾಗುತ್ತದೆ’ ಎಂದು ಕುಟುಕಿದರು.
ವೈಯಕ್ತಿಕ ಟಿಪ್ಪಣಿಯೊಂದಿಗೆ ಮಮ್ದಾನಿ, ಅಧಿಕಾರಕ್ಕೆ ತನ್ನ ಅಸಾಂಪ್ರದಾಯಿಕ ಏರಿಕೆ ಮತ್ತು ಅದು ನ್ಯೂಯಾರ್ಕ್ ನಗರಕ್ಕೆ ಏನನ್ನು ಸಂಕೇತಿಸಿದೆ ಎನ್ನುವುದನ್ನು ಪ್ರತಿಬಿಂಬಿಸಿದರು. ‘ಸಾಂಪ್ರದಾಯಿಕ ಜ್ಞಾನವು ನಾನು ಪರಿಪೂರ್ಣ ಅಭ್ಯರ್ಥಿಯಲ್ಲ ಎನ್ನುವುದನ್ನು ನಿಮಗೆ ಹೇಳುತ್ತದೆ. ನಾನು ಚಿಕ್ಕವನು, ನಾನು ಮುಸ್ಲಿಮ್, ನಾನು ಪ್ರಜಾಪ್ರಭುತ್ವವಾದಿ ಸಮಾಜವಾದಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇದಕ್ಕಾಗಿ ಕ್ಷಮೆಯಾಚಿಸಲು ನಾನು ನಿರಾಕರಿಸುತ್ತೇನೆ. ಆಲೋಚನೆಯ ಸಾಂಪ್ರದಾಯಿಕ ಮಾರ್ಗಗಳು ನಮ್ಮ ಪ್ರಗತಿಯನ್ನು ತಡೆದಿದ್ದವು ಎನ್ನುವುದನ್ನು ಇಂದಿನ ರಾತ್ರಿಯು ನಮಗೆ ತೋರಿಸಿದೆ ಮತ್ತು ಭವಿಷ್ಯದ ಭರವಸೆಗಳು ಇನ್ನು ಮುಂದೆ ಭೂತಕಾಲದ ಅವಶೇಷಗಳಾಗುವುದಿಲ್ಲ ಎಂದರು.’
ಜನಸಮೂಹ ಚಪ್ಪಾಳೆ ತಟ್ಟುತ್ತಿದ್ದಂತೆ ‘ಈ ನಗರವು ನಿಮಗೆ ಸೇರಿದೆ’ ಎಂದು ನ್ಯೂಯಾರ್ಕ್ ನಿವಾಸಿಗಳಿಗೆ ನೆನಪಿಸುವ ಮೂಲಕ ಮಮ್ದಾನಿ ತನ್ನ ಭಾಷಣಕ್ಕೆ ವಿರಾಮ ಹೇಳಿದರು.