ಐಪಿಎಲ್ ಮೂರು ತಂಡಗಳು ಪ್ಲೇ ಆಫ್‌ಗೆ: ಒಂದು ಸ್ಥಾನಕ್ಕೆ ಪೈಪೋಟಿ
PC: x.com/ImIshant
ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಪ್ಲೇಆಫ್ ಹಂತಕ್ಕೆ ಮುನ್ನಡೆದ ಪ್ರಪ್ರಥಮ ತಂಡವಾಗಿ ಗುಜರಾತ್ ಟೈಟನ್ಸ್ ಹೊರಹೊಮ್ಮಿದೆ. ಭಾನುವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡದ ವಿರುದ್ಧ ಸುಲಭ ಜಯ ಸಾಧಿಸಿದ ಶುಭಮನ್ ಗಿಲ್ ಪಡೆ ಮುಂದಿನ ಹಂತ ತಲುಪಿದೆ. ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಕೂಡಾ ಅಗ್ರ-4 ತಂಡಗಳ ಪೈಕಿ ಸ್ಥಾನ ಪಡೆದಿವೆ. ಅಂದರೆ ಉಳಿದ ಒಂದು ಸ್ಥಾನಕ್ಕಾಗಿ ದೆಹಲಿ ಮತ್ತು ಮುಂಬೈ ನಡುವೆ ಪೈಪೋಟಿ ಇದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೂ ಪ್ಲೇ ಆಫ್ ತಲುಪುವ ಕ್ಷೀಣ ಸಾಧ್ಯತೆ ಇದ್ದು, ಉಳಿದ ಎಲ್ಲ ಪಂದ್ಯಗಳನ್ನು ಗೆದ್ದಲ್ಲಿ ಒಟ್ಟು ಅಂಕ 16 ಆಗುತ್ತದೆ. ಉತ್ತಮ ರನ್ ರೇಟ್ ಹಾಗೂ ಇತರ ಫಲಿತಾಂಶಗಳು ತಂಡಕ್ಕೆ ಪೂರಕವಾಗಿ ಬಂದಲ್ಲಿ ಮಾತ್ರ ಎಲ್ಎಸ್‌ಜಿ ಮುನ್ನಡೆಯಲಿದೆ.
ಅಗ್ರ 2 ತಂಡಗಳು ಫೈನಲ್ ತಲುಪಲು ಎರಡು ಅವಕಾಶ ಪಡೆಯಲಿದ್ದು, ಇದಕ್ಕಾಗಿ ಮೂರು ತಂಡಗಳ ನಡುವೆ ಸ್ಪರ್ಧೆ ಇದೆ. ಗುಜರಾತ್ ತಂಡಕ್ಕೆ 2 ಪಂದ್ಯಗಳು ಬಾಕಿ ಇದ್ದು, ಗರಿಷ್ಠ 22 ಅಂಕ ಪಡೆಯಲು ಅವಕಾಶವಿದೆ. ಜಿಟಿ ಅಗ್ರ 2 ತಂಡಗಳಲ್ಲಿ ಸ್ಥಾನ ಪಡೆಯುವ ಅವಕಾಶವಿರುವ ಫೇವರಿಟ್ ತಂಡ ಎನಿಸಿಕೊಂಡಿದೆ.
ದೆಹಲಿ ವಿರುದ್ಧ ಜಿಟಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಕೂಡಾ ಪ್ಲೇಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದಲ್ಲಿ 21 ಅಂಕ ಸಂಪಾದಿಸಲಿದೆ. ಜಿಟಿ ಒಂದು ಪಂದ್ಯ ಸೋತಲ್ಲಿ ಆರ್ಸಿಬಿ ಅಗ್ರ-2 ತಂಡವಾಗಿ ಹೊರಹೊಮ್ಮಲಿದೆ. ಪಂಜಾಬ್ ಕೂಡಾ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಪ್ಲೇ ಆಫ್ ತಲುಪಿದ್ದು, ಆರ್‌ಸಿಬಿ ಅಥವಾ ಜಿಟಿ ಒಂದು ಪಂದ್ಯ ಸೋತರೂ ಶ್ರೇಯಸ್ ಅಯ್ಯರ್ ಪಡೆ ಅಗ್ರಸ್ಥಾನಿಯಾಗಿ ಹೊರಹೊಮ್ಮಲಿದೆ.
ಪ್ಲೇಆಫ್ ಹಂತದಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ತಂಡ ಉಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾಗಿದೆ. ಆಗ ತಂಡದ ಅಂಕ 18 ಆಗಲಿದ್ದು, ನಿವ್ವಳ ರನ್ ರೇಟ್ ಕೂಡಾ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ಡೆಲ್ಲಿ ಕ್ಯಾಪಿಟಲ್ಸ್ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ 17 ಅಂಕ ಸಂಪಾದಿಸಲಿದ್ದು, ಅವರ ಪ್ಲೇ ಆಫ್ ಅವಕಾಶ ನಿವ್ವಳ ರನ್ ರೇಟ್ ಮತ್ತು ಇತರ ಫಲಿತಾಂಶಗಳನ್ನು ಆಧರಿಸಿದೆ.