ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳ ಭರ್ತಿಗೆ ವಾರದೊಳಗೆ ಅಧಿಸೂಚನೆ: ಸಿಎಂ ಸಿದ್ದರಾಮಯ್ಯ
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ
ಕಲಬುರಗಿ: ಕಲಬುರಗಿ: ಹಿಂದೆ ಘೋಷಿಸಿದಂತೆ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚನೆಗೆ ಸಂಪುಟ ಅನುಮೋದನೆ ನೀಡಿದ್ದು, ಮುಂದಿನ ವಾರದೊಳಗೆ ಈ ಸಚಿವಾಲಯದ ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹೈದರಾಬಾದ್ ನಿಝಾಮರ ಆಡಳಿತದಿಂದ ಮುಕ್ತಿ ಪಡೆದು ಭಾರತಕ್ಕೆ ಸೇರ್ಪಡೆಯಾದ ಪ್ರಯುಕ್ತ ಡಿ.ಎ.ಆರ್. ಮೈದಾನದಲ್ಲಿ ಬುಧವಾರ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕಕ್ಕೆ ಈವರೆಗೆ ಯಾರೂ ಕೊಡದ ಮಹತ್ವ ನಮ್ಮ ಸರಕಾರ ಕೊಡುತ್ತಿದೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಲಬುರಗಿಯಲ್ಲೇ ಸಚಿವಾಲಯ ಸ್ಥಾಪನೆಗೆ ಸಂಪುಟ ಒಪ್ಪಿದೆ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಭಾಗದ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ ವಿಶೇಷ ಅನುದಾನಗಳಿಂದ ಅಕ್ಷರ, ಆರೋಗ್ಯ, ಕೃಷಿ, ಕಲ್ಯಾಣ ಪಥ ರಸ್ತೆ, ಹಸಿರು ಪಥ ಯೋಜನೆಗಳ ಅನುಷ್ಠಾನಕ್ಕೆ ತಂದು ಅಲ್ಪಸಂಖ್ಯಾತರ, ಹಿಂದುಳಿದ, ದಲಿತರ ಅಭ್ಯುದಯಕ್ಕೆ ಶ್ರಮಿಸಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೂ ಮನ್ನಣೆ ಕೊಡುವ ಸಲುವಾಗಿ ಕೃಷ್ಣ ಮೇಲ್ದಂಡೆ ಯೋಜನೆಯ 3ನೆಯ ಹಂತದ ನೀರಾವರಿ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಬೃಹತ್ ಪ್ರಮಾಣದಲ್ಲಿ ಅನುದಾನ ನೀಡಿ ಪ್ರಗತಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಿ. ಸುಧಾಕರ್, ಭೈರತಿ ಸುರೇಶ್, ಕೆಕೆಆರ್ ಡಿಬಿ ಅಧ್ಯಕ್ಷ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಬಿ.ಜಿ ಪಾಟೀಲ್ ಸೇರಿದಂತೆ ಇತರ ಗಣ್ಯರು ಇದ್ದರು.