ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 4,2018 ಕೋಟಿ ಅನುದಾನ ಬಿಡುಗಡೆ ಮಾಡದ ಸರ್ಕಾರ ನಡೆ ಖಂಡನೀಯ: ಎಸ್.ಆರ್.ಕೊಲ್ಲೂರು
ಕಲಬುರಗಿ: 2025-26 ನೇ ಸಾಲಿನಲ್ಲಿ ನಿಗದಿಪಡಿಸಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ 4,2018 ಕೋಟಿ ರೂ.ಅನುದಾನ ಬಿಡುಗಡೆ ಮಾಡದ ಸರ್ಕಾರದ ಕ್ರಮ ಖಂಡನೀಯ, ಇದು ದಲಿತರಿಗೆ ಮಾಡಿರುವ ದೊಡ್ಡ ದ್ರೋಹವಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದಿ) ರಾಜ್ಯ ಸಂಚಾಲಕ ಎಸ್.ಆರ್.ಕೊಲ್ಲೂರು ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಂಗಡ ಪತ್ರವನ್ನು ವಿಧಾನ ಸಭೆಯಲ್ಲಿ ಮಂಡನೆ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಬಜೆಟ್‌ನಲ್ಲಿ ಪರಿಶಿಷ್ಟರ ಅಭಿವೃದ್ಧಿಗಾಗಿ 2025-26 ನೇ ಸಾಲಿನಲ್ಲಿ ಅನುದಾನ ನಿಗದಿಪಡಿಸಿದ್ದಾರೆ. ಆದರೆ, ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದ್ದು, ಸರ್ಕಾರದ ನಡೆ ಖಂಡಿಸುವುದಾಗಿ ಹೇಳಿದರು.
ಅನುದಾನ ಬಿಡುಗಡೆ ಮಾಡುವ ಕುರಿತು ಕ್ರಿಯಾ ಯೋಜನೆ ಸಭೆ ಆ.16 ರಂದು ವಿಧಾನ ಸಭೆಯಲ್ಲಿ ನಡೆದಿತ್ತು. ಅನುದಾನ ಬಿಡುಗಡೆಗಾಗಿ ನಿರ್ಣಯ ಕೂಡ ಕೈಗೊಂಡಿದ್ದರೂ ಕ್ರಿಯಾ ಯೋಜನೆ ಸಭೆಯ ನಡುವಳಿಗಳನ್ನು ಇನ್ನೂ ಯಾವ ಇಲಾಖೆಗಳಿಗೂ ತಲುಪಿಸಿಲ್ಲ. ಮುಖ್ಯಮಂತ್ರಿ ಹಸ್ತಾಕ್ಷರ ಆಗಿಲ್ಲ. ಇದರಿಂದ ದಲಿತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಹೇಗೆ ಸಾಧ್ಯವಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಸಂಸ ಸಮಿತಿಗಳು ಕಾರಣವಾಗಿವೆ. ಆದರೆ, ದಲಿತರಿಗೆ ಅನ್ಯಾಯ ಆಗುತ್ತಿರುವುದು ನೋವಿನ ಸಂಗತಿ. ಹಣಕಾಸಿನ ವರ್ಷ ಮುಗಿಯಲು ಇನ್ನೂ ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಮುಖ್ಯಮಂತ್ರಿಗಳ ಅನುದಾನ ಹೇಗೆ ಖರ್ಚು ಮಾಡಲು ಸಾಧ್ಯವಾಗುತ್ತದೆ ಎಂದರು.
ನಿರುದ್ಯೋಗಿ ಯುವಕರು, ಯುವ ಉದ್ದಿಮೆದಾರರು ಅನುದಾನದ ನಿರೀಕ್ಷೆಯಲ್ಲಿದ್ದಾರೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ದಲಿತರನ್ನು ಸಬಲರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರ್ಕಾರಕ್ಕೆ ಬಲವಾದ ಹಕ್ಕೊತ್ತಾಯ ಮಂಡಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಖಂಡ ಮರೆಪ್ಪ ಬನ್ನಟ್ಟಿ, ಮಲ್ಲಿಕಾರ್ಜುನ ಶೆಳ್ಳಗಿ, ಮರಲಿಂಗ ಕೊಲ್ಲೂರು, ಪಾಂಡುರಂಗ ಮದನಕರ್ ಸೇರಿದಂತೆ ಮತ್ತಿತರರು ಇದ್ದರು.