ಕಲಬುರಗಿ ಜಿಲ್ಲೆಯಾದ್ಯಂತ ಶೇ.53.79ರಷ್ಟು ಗಣತಿ ನಮೂನೆ ವಿತರಣೆ: ಇಕ್ರಮ್ ಶರೀಫ್
Update: 2026-07-03 21:20 IST
ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ಭರದಿಂದ ಸಾಗಿದ್ದು, ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 23,71,542 ಮತದಾರರ ಪೈಕಿ ಶುಕ್ರವಾರದವರೆಗೆ 12,75,654 (ಶೇ.53.79)ರಷ್ಟು ಮತದಾರರಿಗೆ ಗಣತಿ ನಮೂನೆ ವಿತರಣೆ ಮಾಡಲಾಗಿದೆ ಎಂದ ಜಿಲ್ಲಾ ಚುನಾವಣಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಇದುವರೆಗೆ ಬಿ.ಎಲ್.ಒ. ಗಳು 13,240 (ಶೇ.0.56) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. ಇನ್ನು 1,628 (ಶೇ.0.07) ಮತದಾರರು ಸ್ವಯಂ ಪ್ರೇರಿತವಾಗಿ ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿ.ಎಲ್.ಒ.ಗಳು ಮನೆ-ಮನೆ ಭೇಟಿ ಕೊಟ್ಟಾಗ ಇಲ್ಲಿಯವರೆಗೆ 44 ಮತದಾರರು ಸ್ಥಳಾಂತರಗೊಂಡಿರುವುದು ಮತ್ತು 97 ಜನ ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ.