ಕಲಬುರಗಿ | ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಜೈಲು, 50 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ
ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 50 ಸಾವಿರ ದಂಡ ವಿಧಿಸಿ ಕಲಬುರಗಿಯ ವಿಶೇಷ ಪೊಕ್ಸೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರದ ಪ್ರಕಾರ, ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ 17 ವರ್ಷದ ಅಪ್ರಾಪ್ತ ಬಾಲಕಿಗೆ ಆರೋಪಿತ ನಂದಪ್ಪ ಮಹಾದೇವ ಕಟ್ಟಿಮನಿ (30) ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಹಲವು ತಿಂಗಳುಗಳಿಂದ ಸಲುಗೆ ಬೆಳೆಸಿದ್ದನು. ಬಳಿಕ ಬಾಲಕಿ ಅಪ್ರಾಪ್ತ ವಯಸ್ಕಳಾಗಿರುವುದು ತಿಳಿದಿದ್ದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ನಂತರ 2025ರ ಫೆಬ್ರವರಿ 14ರಂದು ರಾತ್ರಿ ಬಾಲಕಿಯನ್ನು ಮನೆಯಿಂದ ಅಪಹರಿಸಿಕೊಂಡು ಹೋಗಿದ್ದನು.
ಪ್ರಕರಣ ಸಂಬಂಧ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಪಿಎಸ್‌ಐ ಮಡಿವಾಳಪ್ಪ ಹಾಗೂ ಹೆಚ್ಚುವರಿ ಸಿಪಿಐ ಕಪೀಲದೇವ ಅವರು ನಡೆಸಿ, ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳು ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್ 4 ಮತ್ತು 6ರ ಅಡಿಯಲ್ಲಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಅಭಿಯೋಜನಾ ಪಕ್ಷವು ಮಂಡಿಸಿದ ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ಪರಿಗಣಿಸಿದ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ-ಎಫ್‌ಟಿಎಸ್‌ಸಿ-1ರ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಅವರು ಆರೋಪಿಯ ಅಪರಾಧ ಸಾಬೀತಾಗಿದೆ ಎಂದು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡ, ದಂಡ ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಿದ್ದಾರೆ.
ಅಲ್ಲದೆ, ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂ ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ, ದಂಡ ಪಾವತಿಸದಿದ್ದರೆ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಎರಡೂ ದಂಡ ಸೇರಿ ಆರೋಪಿ 50 ಸಾವಿರ ದಂಡ ಪಾವತಿಸಬೇಕಾಗಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು. ಮಿರಿಯಾಣ ಪೊಲೀಸ್ ಠಾಣೆಯ ಸಿಬ್ಬಂದಿ ಲಕ್ಷ್ಮೀಕಾಂತ (ಹೆಚ್‌ಸಿ-228) ಹಾಗೂ ಪರಶುರಾಮ (ಹೆಚ್‌ಸಿ) ಅವರು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು.