ಆಳಂದ | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಆಳಂದ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಕೊರಳ್ಳಿ ಗ್ರಾಮದ ರೈತರು ಪಟ್ಟಣದಲ್ಲಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.
ರೈತರಿಗೆ ನಿಗದಿಪಡಿಸಿದ 7 ಗಂಟೆಗಳ ವಿದ್ಯುತ್ ಪೂರೈಕೆಯನ್ನು ನಿರಂತರವಾಗಿ ನೀಡುವ ಬದಲು ಗಂಟೆಗೊಮ್ಮೆ ಕಡಿತಗೊಳಿಸಲಾಗುತ್ತಿದೆ. ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಟ್ರಾನ್ಸ್ಫಾರ್ಮರ್‌ಗಳು ಸುಟ್ಟರೂ ಸಕಾಲಕ್ಕೆ ದುರಸ್ತಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಅಮರ್ಜಾ ಆಣೆಕಟ್ಟು ಮಾರ್ಗದ ಶಿಫ್ಟ್ವೈಸ್ ವಿದ್ಯುತ್ ಪದ್ಧತಿ ರದ್ದುಪಡಿಸಿ ಎಲ್ಲರಿಗೂ ಸಮಾನ ವಿದ್ಯುತ್ ನೀಡಬೇಕು ಹಾಗೂ ರಾತ್ರಿ ವೇಳೆ ಸಿಂಗಲ್‌ಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ರೈತ ಮನವಿ ಸ್ವೀಕರಿಸಿದ ಜೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಪ್ರಭು ಮಡ್ಡಿತೋಟ್, ಮಳೆಯ ಕೊರತೆಯಿಂದಾಗಿ ಟ್ರಾನ್ಸಫಾರಂಗಳ ಮೇಲೆ ಭಾರ ಹೆಚ್ಚಾಗಿ ತಾಂತ್ರಿಕ ತೊಂದರೆಯಿಂದ ವಿದ್ಯುತ್ ಕಡಿತಗೊಂಡು ಸಮಸ್ಯೆ ಎದುರಾಗುತ್ತಿದೆ. ಇದನ್ನು ಸರಿಪಡಿಸಿ ಪೂರೈಕೆಗೆ ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಮದ ಹಿರಿಯ ಚಂದ್ರಕಾಂತ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ವಾರದ, ಮುಖಂಡ ನಿಜಲಿಂಗಪ್ಪ ರಾಮಶೆಟ್ಟಿ, ಪ್ರದೀಪ ಪಟ್ಟಣ, ಮೋತಿರಾಮ ಪವಾರ, ಬಸವರಾಜ ಮಡಿವಾಳ, ಮಹೇಶ ವಾರದ, ಅಭಿಷೇಕ ಪಾಟೀಲ, ಬಸವರಾಜ ಕುಂಬಾರ,ಶೇಖರ ಕೊಗನೂರ, ಶ್ರೀಮಂತ ಉಡಗಿ, ನಾಗೇಂದ್ರ ಸಾರವಾಡ, ಈರಣ್ಣ ಪಟ್ಟಣ, ಸಿದ್ರಾಮಪ್ಪ ಆಲಮೇಲ್, ಸುಭಾಷ ಪವಾರ ಸೇರಿದಂತೆ ಕೊರಳ್ಳಿ ಗ್ರಾಮದ ಪಂಪ್‌ಸೆಟ್ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.