×
Ad

ಕಲಬುರಗಿ | ಅಫಜಲಪುರ ಠಾಣೆಯಿಂದ ಪರಾರಿಯಾದ ಪೋಕ್ಸೊ ಪ್ರಕರಣದ ಆರೋಪಿಯ ಬಂಧನ

ಕರ್ತವ್ಯಲೋಪ ಆರೋಪದಲ್ಲಿ ಮೂವರು ಪೊಲೀಸರ ಅಮಾನತು

Update: 2026-07-03 19:55 IST

ಕಲಬುರಗಿ: ಅಫಜಲಪುರ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಪೋಕ್ಸೊ ಹಾಗೂ ಬಾಲಕಿ ಅಪಹರಣ ಪ್ರಕರಣದ ಆರೋಪಿಯನ್ನು ಮತ್ತೆ ಬಂಧಿಸಲಾಗಿದ್ದು,  ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಮಂಜುನಾಥ ಇಂಗಳೆ(23) ಎಂಬ ಆರೋಪಿ ಜುಲೈ 2ರಂದು ನಸುಕಿನ ಜಾವ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ.

16 ವರ್ಷದ ಬಾಲಕಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಮಂಜುನಾಥ ಇಂಗಳೆ ಬಾಲಕಿಯನ್ನು ಅಪಹರಿಸಿರುವುದನ್ನು ಪತ್ತೆಹಚ್ಚಿದ್ದು, ಜುಲೈ 1ರಂದು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದರು. 

ಆದರೆ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ನಿದ್ರೆಗೆ ಜಾರಿದ್ದನ್ನು ಬಳಸಿಕೊಂಡ ಆರೋಪಿ, ಕೈಗೆ ಹಾಕಿದ್ದ ಕೈಕೋಳವನ್ನು ಕಳಚಿಕೊಂಡು ಠಾಣೆಯ ಎರಡನೇ ಮಹಡಿಯ ಅಂಚಿಗೆ ತೆರಳಿ, ಅಲ್ಲಿದ್ದ ಬೇವಿನ ಮರದ ರೆಂಬೆಯ ಸಹಾಯದಿಂದ ಕೆಳಗಿಳಿದು ಪರಾರಿಯಾಗಿದ್ದಾನೆ. ಈ ಸಂಪೂರ್ಣ ಘಟನೆ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಘಟನೆಯ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಆರೋಪಿಯ ಬಂಧನಕ್ಕಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಪಿಎಸ್‌ಐ ಸೋಮಲಿಂಗ ಒಡೆಯರ್ ಹಾಗೂ ರೇವೂರ ಠಾಣೆಯ ಪಿಎಸ್‌ಐ ವಾತ್ಸಲ್ಯ ನೇತೃತ್ವದಲ್ಲಿ ನಾಲ್ವರು ಸಿಬ್ಬಂದಿಯ ತಂಡ ಶೋಧ ಕಾರ್ಯ ನಡೆಸಲಾಗಿತ್ತು. ತನಿಖೆಯ ಭಾಗವಾಗಿ ಒಂದು ತಂಡವನ್ನು ಪುಣೆಗೆ ಕಳುಹಿಸಲಾಗಿತ್ತು. ಕೊನೆಗೂ ಆರೋಪಿ ಮಂಜುನಾಥನನ್ನು ಅಫಜಲಪುರ ತಾಲೂಕಿನ ತೆಲ್ಲೂಣಗಿ ಗ್ರಾಮದಲ್ಲಿ ಮಧ್ಯಾಹ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂವರು ಪೊಲೀಸರ ಅಮಾನತ್ತು: ಎಸ್‌ಪಿ

ಪ್ರಕರಣದಲ್ಲಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ರವಿದಾಸ್, ಕಾನ್‌ಸ್ಟೆಬಲ್‌ಗಳಾದ ಶಿವಾನಂದ ಮತ್ತು ಪ್ರಶಾಂತ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶಿಸಿದ್ದಾರೆ. ಅಲ್ಲದೆ, ಇಬ್ಬರು ಗೃಹರಕ್ಷಕ ಸಿಬ್ಬಂದಿಗಳ ವಿರುದ್ಧ ಇಲಾಖಾ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

ಇನ್ನು, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗ ಒಡೆಯರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿರುವುದು ಗಮನ ಸೆಳೆದಿದ್ದು, ಪೊಲೀಸ್ ಇಲಾಖೆಯ ಭದ್ರತಾ ವ್ಯವಸ್ಥೆ ಕುರಿತು ಪ್ರಶ್ನೆಗಳು ಮೂಡಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News