ಆಳಂದ ಮತಗಳ್ಳತನ ಪ್ರಕರಣ | ಬಿಜೆಪಿಯ ಮಾಜಿ ಶಾಸಕ, ಪುತ್ರನಿಗೆ ಎಸ್ಐಟಿ ನೋಟಿಸ್: ನಿರೀಕ್ಷಣಾ ಜಾಮೀನಿಗೆ ಅರ್ಜಿ
ಕಲಬುರಗಿ: ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ 6 ಸಾವಿರಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ತನಿಖೆ ಆರಂಭಿಸಿದ್ದು, ಇದೀಗ ಆಳಂದ ಮತಕ್ಷೇತ್ರದ ಮಾಜಿ ಶಾಸಕ ಸುಭಾಷ ಗುತ್ತೇದಾರ್ ಮತ್ತು ಅವರ ಪುತ್ರನಿಗೆ ಬುಧವಾರ ಎಸ್ಐಟಿಯು ನೋಟಿಸ್ ನೀಡಿದೆ.
ಆಳಂದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಪುತ್ರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷ ಗುತ್ತೇದಾರ್ ಗೆ ಖುದ್ದಾಗಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ನೋಟಿಸ್ ನೀಡುತ್ತಿದಂತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ನಿರೀಕ್ಷಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಳಂದ ಕ್ಷೇತ್ರದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲು ಯತ್ನಿಸಲಾಗಿತ್ತು ಎಂದು ಕ್ಷೇತ್ರದ ಹಾಲಿ ಶಾಸಕ ಬಿ.ಆರ್.ಪಾಟೀಲ್ ಅವರು ಜನಪ್ರತಿನಿಧಿ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ಕುರಿತು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿಸ್ಕೃತವಾಗಿ ಸುದ್ದಿಗೋಷ್ಠಿ ನಡೆಸಿದ್ದರು.
ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯಲ್ಲಿ ಎಸ್ಐಟಿ ತಂಡ ಐವರ ಮನೆಗಳ ಮೇಲೆ ದಾಳಿ ನಡೆಸಿ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಮಹತ್ವದ ದಾಖಲೆಗಳು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿತ್ತು. ಆಳಂದ ಬಿಜೆಪಿ ಮಾಜಿ ಶಾಸಕನ ಪುತ್ರನ ನಿವಾಸದ ಮೇಲೆ ಎಸ್ಐಟಿ ತಂಡ ದಾಳಿ ನಡೆಸಿತ್ತು. ಎಸ್ಐಟಿ ತನಿಖೆಯ ವೇಳೆ ಆಳಂದ ಮತಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಪಟ್ಟಿ ಸುಟ್ಟುಹಾಕಿರುವುದು ಮತ್ತು ಹಳ್ಳವೊಂದರಲ್ಲಿ ಮತದಾರರ ಚೀಟಿಯ ಪಟ್ಟಿಯ ರಾಶಿಯೇ ಪತ್ತೆಯಾಗಿತ್ತು. ಇದೀಗ ಅದೇ ಪ್ರಕರಣಕ್ಕೆ ಕುರಿತಾಗಿ ಎಸ್ಐಟಿ ತಂಡವು ತನಿಖೆ ಮುಂದುವರಿಸಿದೆ ಎನ್ನಲಾಗುತ್ತಿದೆ.