ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ತೊಡೆದುಹಾಕುವುದೇ 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಮುಖ್ಯ ಧ್ಯೇಯ: ಉಮಾ ಪೂಜಾರಿ
ಕಲಬುರಗಿ: ಹೆಣ್ಣು ಮಕ್ಕಳ ಮೇಲಿನ ತಾರತಮ್ಯವನ್ನು ತೊಡೆದುಹಾಕುವುದು ಮತ್ತು ಅವರ ಬಗ್ಗೆ ಜನರಲ್ಲಿ ನಕರಾತ್ಮಕ ಮನೋಭಾವವನ್ನು ಬದಲಾಯಿಸುವುದು 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಜೆಂಡರ್ ಸ್ಪೇಷಲಿಸ್ಟ್ ಉಮಾ ಪೂಜಾರಿ ಹೇಳಿದರು.
ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ರಾಜಶೇಖರ ಮಹಾಸ್ವಾಮೀಜೀ ಬಿ.ಎಡ್ ಕಾಲೇಜಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ ಹಾಗೂ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘ ಶಕ್ತಿ ಸದನ (ಸ್ವಾಧರ ಗೃಹ )ಕಲಬುರಗಿ ಸಂಯುಕ್ತಾಶ್ರಯದಲ್ಲಿ ಮಿಷನ ಶಕ್ತಿ ಯೋಜನೆ ಹಾಗೂ ಅದರ ಉಪಯೋಜನೆಗಳು ಮತ್ತು ಶಕ್ತಿ ಸದನ ಯೋಜನೆ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮಹತ್ವ ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಭಾಗವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯಡಿ, ಹೆಣ್ಣು ಮಕ್ಕಳ ಹೆಸರಲ್ಲಿ ಪ್ರತಿ ತಿಂಗಳು 1000 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಿದರೆ, ಈ ಮೊತ್ತವು ಒಂದು ವರ್ಷದಲ್ಲಿ 12 ಸಾವಿರ ಆಗುತ್ತದೆ. 14 ವರ್ಷಗಳಲ್ಲಿ ಒಟ್ಟು ಮೊತ್ತ 1,68,000 ಆಗಲಿದೆ. ನಂತರ 21 ವರ್ಷಗಳ ನಂತರ ನಿಮ್ಮ ಮಗಳು 6 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಾರೆ ಎಂದರು.
ಡಾ. ಭೂಮಿಕಾ ಮಾತನಾಡಿ, ಈ ಯೋಜನೆಯನ್ನು ಎರಡು ಘಟಕಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು- ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುವ ಮೂಲಕ ಸಿಎಸ್‌ರ್ (ಮಕ್ಕಳ ಲಿಂಗ ಅನುಪಾತ) ಕುಸಿತವನ್ನು ಕಡಿಮೆ ಮಾಡುವುದು. ಎರಡನೆಯದು- 2011 ರ ಜನಗಣತಿಯ ಪ್ರಕಾರ, ಕಡಿಮೆ ಲಿಂಗಾನುಪಾತ ಇರುವ 100 ಜಿಲ್ಲೆಗಳಲ್ಲಿ ಕೆಲಸ ಮಾಡುವುದು. ಇದರಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಆದರೆ, ಈಗ ಸರ್ಕಾರ ದೇಶದ ಇತರೆ ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಮಹದೇವಿ ತಾಯಿ ವಿದ್ಯಾವರ್ಧಕ ಸಂಘದ ಅಧೀಕ್ಷಕಿ ಜಯಶ್ರೀ ಮಾತನಾಡಿ, ಲಿಂಗಾನುಪಾತದ ಅಂತರವನ್ನು ಕಡಿಮೆ ಮಾಡುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಲಿಂಗ ಅಸಮಾನತೆಯನ್ನು ತೆಗೆದುಹಾಕುವುದು ಯೋಜನೆಯ ಉದ್ದೇಶವಾಗಿದೆ. ಯೋಜನೆಯಡಿ, ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಲು ಮತ್ತು ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಹೆಣ್ಣು ಮಕ್ಕಳ ಹೆಸರಲ್ಲಿ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಅವರ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಈ ಹಣದಿಂದ ನಿಮ್ಮ ಮಗಳು ತನ್ನ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು, ಪ್ರಶಿಕ್ಷಣಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಅಶೋಕರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.