ವಿದ್ಯಾರ್ಥಿ ವೇತನ, ಸರಕಾರಿ ಶಾಲೆಗಳ ರಕ್ಷಣೆಗೆ ಆಗ್ರಹಿಸಿ ಮಾ.1ರಂದು ಬೆಂಗಳೂರು ಚಲೋ ಚಳುವಳಿ
ಕಲಬುರಗಿ : ವಿದ್ಯಾರ್ಥಿ ವೇತನ ನೀಡುವಂತೆ ಮತ್ತು ಸರಕಾರಿ ಶಾಲೆಗಳ ರಕ್ಷಣೆಗೆ ಆಗ್ರಹಿಸಿ ಮಾ.1ರಂದು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್.ಕೆ. ಹೇಳಿದರು.
ನಗರದದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಹಲವೆಡೆ ಕೆಲವು ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಒಂದೆಡೆ, ದಿನದಿಂದ ದಿನಕ್ಕೆ ಶಿಕ್ಷಣದ- ಅದರಲ್ಲೂ, ಉನ್ನತ ಶಿಕ್ಷಣದ ವೆಚ್ಚ ಅತ್ಯಂತ ಅಧಿಕವಾಗುತ್ತಿದೆ. ಆದರೆ ಇನ್ನೊಂದೆಡೆ, ಕ್ರಮೇಣವಾಗಿ ವಿದ್ಯಾರ್ಥಿ ವೇತನ ಕಡಿತಗೊಳುತ್ತಿರುವುದರಿಂದ ಅಧಿಕ ಪ್ರಮಾಣದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವ ಅನಿವಾರ್ಯತೆಗೆ ತಳ್ಳಲ್ಪಟ್ಟಿದ್ದಾರೆ. ಅದರಲ್ಲೂ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತರಾಗಿರುವ ರೈತ, ಕಾರ್ಮಿಕರನ್ನೊಳಗೊಂಡಂತೆ ಬಡಜನರ ಮಕ್ಕಳ ಶಿಕ್ಷಣದ ಕನಸುಗಳು ಇದರಿಂದ ಚಿದ್ರಗೊಳ್ಳುತ್ತಿವೆ. ರಾಜ್ಯ ಸರಕಾರವು ಈ ಕುರಿತು ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗಷ್ಟೇ ರಾಜ್ಯ ಸರಕಾರ ' ಹಬ್ ಅಂಡ್ ಸ್ಪೋಕ್' ಅಡಿಯಲ್ಲಿ ಕಡಿಮೆ ಹಾಜರಾತಿ ಇರುವ ಸರಕಾರಿ ಶಾಲೆಗಳನ್ನು ಇತರ ಶಾಲೆಗಳೊಂದಿಗೆ ಸಂಯೋಜಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸುಧಾರಣಾ ಸಮಿತಿಯನ್ನು ಸಹ ರಚಿಸಲಾಗಿದೆ. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಶಾಲೆಗಳು 10 ಮಕ್ಕಳಿಗಿಂತ ಕಡಿಮೆ ದಾಖಲಾತಿಯನ್ನು ಹೊಂದಿವೆ. ಈ ಶಾಲೆಗಳ ಭವಿಷ್ಯದ ಕುರಿತು ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ತಲೆದೊರಿದೆ. ಸರಕಾರವು ರಾಜ್ಯದ ಬಡಜನರ ಮಕ್ಕಳ ಶಿಕ್ಷಣದ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಆದ್ಯತೆಯ ಮೇರೆಗೆ ಸರ್ಕಾರವು ಶಿಕ್ಷಣಕ್ಕೆ ಬಜೆಟ್ ನಲ್ಲಿ ಅನುದಾನ ನಿಗದಿಪಡಿಸಬೇಕು ಮತ್ತು ಎಲ್ಲ ವಿಭಾಗದ ಮತ್ತು ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಖಾತ್ರಿ ಪಡಿಸಬೇಕು ಹಾಗೂ ಸರಕಾರಿ ಶಾಲೆಗಳನ್ನು ಸಂಯೋಜನೆಗೊಳಿಸುವ ಬದಲು ಹಾಜರಾತಿ ಕಡಿಮೆಯಿರುವ ಶಾಲೆಗಳನ್ನು ಅವಶ್ಯಕ ಸೌಲಭ್ಯ ನೀಡಿ ರಕ್ಷಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮಾರ್ಚ್1 ರಂದು ಬೆಂಗಳೂರು ಚಲೋ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಪ್ರತಿಭಟನಾ ಸಮಾವೇಶದಲ್ಲಿ ಭಾಷಣಕಾರರಾಗಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ಮೈಸೂರಿನ ಸಾಮಾಜಿಕ ಹೋರಾಟಗಾರ ಉಗ್ರನರಸಿಂಹೇಗೌಡ, ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಅವರು ಆಗಮಿಸುವರು. ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷೆ ಅಭಯಾ ದಿವಾಕರ್ ಅವರು ವಹಿಸಲಿದ್ದಾರೆ. ಪ್ರತಿಭಟನೆಗೆ ಜಿಲ್ಲೆಯಿಂದಲೂ ನೂರಾರು ಜನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅರ್ಹ ವಿದ್ಯಾರ್ಥಿಗಳಿಗೆ ಈ ಕೂಡಲೇ ವಿದ್ಯಾರ್ಥಿ ವೇತನ ವಿತರಿಸುವಂತೆ, ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚದಿರುವಂತೆ ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಖಜಾಂಚಿ ವೆಂಕಟೇಶ್ ದೇವದುರ್ಗ, ಉಪಾಧ್ಯಕ್ಷ ಗೋವಿಂದ್ ಯಾಳವಾರ್, ನಾಗರಾಜ್ ರಾವೂರ್ ಮುಂತಾದವರು ಉಪಸ್ಥಿತರಿದ್ದರು.