×
Ad

ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಅಕ್ರಮ: ರೈತರ ಆರೋಪ

Update: 2025-12-16 22:38 IST

ಕಲಬುರಗಿ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಚಿಂಚೋಳಿ ತಾಲೂಕಿನ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆಯು ಕಬ್ಬಿನ ತೂಕದಲ್ಲಿ ವ್ಯಾಪಕ ಅಕ್ರಮ ಎಸಗುವ ಮೂಲಕ ರೈತರನ್ನು ಶೋಷಿಸುತ್ತಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕ (SKM) ನೇತೃತ್ವದಲ್ಲಿ ಮಂಗಳವಾರ ವಿವಿಧ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಸಿದ್ದಸಿರಿ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕಷ್ಟಪಟ್ಟು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವ ಬದಲು ತೂಕದಲ್ಲಿ ಮೋಸ ಮಾಡುವ ಮೂಲಕ ರೈತರ ರಕ್ತ ಹೀರುತ್ತಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಆಕ್ರೋಶ ಹೊರಹಾಕಿದರು. ಕೇವಲ ಒಂದು ಲೋಡ್‌ನಲ್ಲಿ 6 ಕ್ವಿಂಟಾಲ್‌ಗಿಂತಲೂ ಹೆಚ್ಚು ತೂಕ ಕಡಿಮೆ ತೋರಿಸುತ್ತಿರುವುದು ಕೇವಲ ತಾಂತ್ರಿಕ ದೋಷವಲ್ಲ, ಇದೊಂದು ವ್ಯವಸ್ಥಿತ ಸಂಚು. ಈ ಮೂಲಕ ರೈತರಿಗೆ ಭಾರಿ ಆರ್ಥಿಕ ನಷ್ಟ ಉಂಟುಮಾಡಲಾಗುತ್ತಿದೆ ಎಂದು ರೈತರು ದೂರಿದರು.

ಬಾಕಿ ಹಣ ಮತ್ತು ಬಡ್ಡಿ ಪಾವತಿಗೆ ಒತ್ತಾಯ:

ಸಕ್ಕರೆ ಕಾರ್ಖಾನೆಗಳು ಆರಂಭವಾಗಿ ತಿಂಗಳುಗಳು ಕಳೆದರೂ ರೈತರ ಖಾತೆಗೆ ಹಣ ಜಮಾ ಮಾಡದಿರುವುದನ್ನು ರೈತ ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. ನಿಯಮದಂತೆ ಕಬ್ಬು ಪೂರೈಕೆಯಾದ 14 ದಿನಗಳೊಳಗೆ ಹಣ ಪಾವತಿಸಬೇಕು. ವಿಳಂಬವಾದಲ್ಲಿ ಬಡ್ಡಿ ಸೇರಿಸಿ ನೀಡಬೇಕು. ಸಿದ್ಧಸಿರಿ ಕಾರ್ಖಾನೆಯು ಕೇವಲ 2550 ಪಾವತಿಸಿ ಉಳಿದ ಬಾಕಿಯನ್ನು ತಡೆಹಿಡಿದಿದೆ. ಇದನ್ನು ತಕ್ಷಣವೇ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ್ ಮಾಡ್ಯಾಳ, ಮೌಲಾ ಮುಲ್ಲಾ, ಕೃಪಾ ಸಾಗರ ಕೊರವಿ, ಸಿದ್ಧು ಎಸ್.ಎಲ್, ಕರೆಪ್ಪ ಕರಗೊಂಡ, ಸಿದ್ದು ಡೊಣ್ಣೂರ್, ಬಸವರಾಜ ಮರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News