×
Ad

ಕಲಬುರಗಿ | ಛಲವಾದಿ ನಾರಾಯಣಸ್ವಾಮಿಗೆ ದಿಗ್ಬಂಧನ ಖಂಡಿಸಿ ಮೇ.24ರಂದು ಬಿಜೆಪಿಯಿಂದ ಪ್ರತಿಭಟನೆ: ಎನ್.ರವಿಕುಮಾರ್

Update: 2025-05-23 17:46 IST

ಕಲಬುರಗಿ : ಚಿತ್ತಾಪುರದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಪ್ರವಾಸಿ ಮಂದಿರದಲ್ಲಿ 5 ಗಂಟೆಗಳ ಕಾಲ ದಿಗ್ಬಂಧನ ಮಾಡಿರುವ ಘಟನೆಯನ್ನು ಖಂಡಿಸಿ ಮೇ. 24ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್.ರವಿಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡಿರುವ ನೆಪವನ್ನು ಇಟ್ಟುಕೊಂಡು ಛಲವಾದಿ ನಾರಾಯಣಸ್ವಾಮಿ ಅವರಿಗೆ ದಿಗ್ಬಂಧನ ಮಾಡಿರುವುದು ಖಂಡನಾರ್ಹ. ಇದು ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಯಾವ ತಪ್ಪಿಗೆ ಈ ಶಿಕ್ಷೆ ? ಚಿತ್ತಾಪೂರಕ್ಕೆ ಹೋಗಿ ತಿರಂಗಾ ಯಾತ್ರೆ ಮಾಡಬಾರದ? ಅಲ್ಲಿ ಭಾಷಣ ಮಾಡಬಾರದಾ?  ಈ ಕೃತ್ಯ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ, ಶಿವಾ ಅಷ್ಟಗಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ, ಈ ತರಹದ ಗೂಂಡಾ ವರ್ತನೆಗಳು ಬಿಜೆಪಿ ಮುಖಂಡರ ವಿರುದ್ಧ ಮಾಡುತ್ತಿರುವುದು ಸರಿಯಲ್ಲ. ಈ ಸಚಿವ ಸ್ಥಾನ  ಶಾಶ್ವತ ಇಲ್ಲ. ಒಂದಲ್ಲ ಒಂದು ದಿನ ಬದಲಾಗಲಿದೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ, ಛಲವಾದಿ ನಾರಾಯಣಸ್ವಾಮಿ ಅವರಿಗೆ ಅಪಮಾನ ಮಾಡುವುದಲ್ಲದೆ, ಕಲಬುರಗಿ ಜಿಲ್ಲೆಯ ಗೂಂಡಾ ರಾಜ್ಯವನ್ನಾಗಿ ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು. ದಿಗ್ಬಂಧನಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳಾದ ಮಹೇಶ್ ಮೇಘನ್ನನವರ್, ಶಂಕರಗೌಡ ಪಾಟೀಲ್, ಚಂದ್ರಶೇಖರ್ ತಿಗಡಿ ಸೇರಿದಂತೆ ಇತರ ಅಧಿಕಾರಿಗಳನ್ನು ವಜಾ ಮಾಡಬೇಕು ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್‌ಗಳನ್ನು ವಾಪಸ್ ಪಡೆಯುವುದು ಸೇರಿದಂತೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ರವಿಕುಮಾರ್ ಆಗ್ರಹಿಸಿದರು.

ಪ್ರಮುಖ ಬೇಡಿಕೆಗಳನ್ನು ಈಡೇರಿಸುವವರೆಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯಲಿರುವ ಧರಣಿ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ. ಈಗಾಗಲೇ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ, ರಾಜ್ಯಪಾಲರು, ಡಿಐಜಿ ಸೇರಿದಂತೆ ಹಲವರಿಗೆ ಮನವಿ ಪತ್ರ ಬರೆದಿದ್ದೇವೆ. ಶನಿವಾರ ನಡೆಯಲಿರುವ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಗೋವಿಂದ್ ಕಾರಜೋಳ, ಸಿ.ಟಿ ರವಿ ಸೇರಿದಂತೆ ಹಲವು ನಾಯಕರುಗಳು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಶಾಸಕ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಶಶೀಲ್ ನಮೋಶಿ, ಚಂದು ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೇದಾರ್, ಅಮರನಾಥ್ ಪಾಟೀಲ್, ಶಿವರಾಜ್ ರದ್ದೇವಾಡಗಿ, ನಿತಿನ್ ಗುತ್ತೇದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News