×
Ad

ದಲಿತರಿಗೆ ಮೀಸಲಿಟ್ಟ ಅನುದಾನ ವರ್ಗಾವಣೆಯಾಗಿದ್ದರೆ ಬಿಜೆಪಿ ದಾಖಲೆ ನೀಡಲಿ : ಸಚಿವ ಪ್ರಿಯಾಂಕ್ ಖರ್ಗೆ

Update: 2025-07-28 20:01 IST

ಪ್ರಿಯಾಂಕ್ ಖರ್ಗೆ

ಕಲಬುರಗಿ : ಎಸ್‍ಸಿಪಿ/ಟಿಎಸ್‍ಪಿ ಅನುದಾನ ವರ್ಗಾವಣೆಯಾಗಿದ್ದರೆ ಆ ಬಗ್ಗೆ ಬಿಜೆಪಿ ದಾಖಲೆ ನೀಡಲಿ. ಒಂದು ವೇಳೆ ಆ ರೀತಿ ಅನುದಾನ ವರ್ಗಾವಣೆಯಾಗಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸೋಮವಾರ ಕಲಬುರಗಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುವುದು ಬಿಟ್ಟು, ಜನರಿಗೆ ದಾರಿ ತಪ್ಪಿಸುವುದನ್ನು ಬಿಟ್ಟು, ಸರಕಾರಕ್ಕೆ ದಾಖಲೆ ಒದಗಿಸಲಿ ಎಂದು ಆಗ್ರಹಿಸಿದರು.

ಬಿಜೆಪಿ ಕಾಲದಲ್ಲಿ ಎಸ್‍ಸಿಪಿ/ ಟಿಎಸ್‍ಪಿ ಅನುದಾನ ವರ್ಗಾವಣೆ ಆಗಿತ್ತು. ಅದನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದರು. ಈಗ ಅದೇ ಬಿಜೆಪಿ ನಾಯಕರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಬಿಜೆಪಿಯವರ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಕೇಂದ್ರದಿಂದ ಅನುದಾನ ತರಲಿ :

ದಲಿತರು, ಆದಿವಾಸಿಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಬಿಜೆಪಿ ನಾಯಕರು ಕೇಂದ್ರದಿಂದ ಅನುದಾನ ತರಿಸಿಕೊಡಲಿ ಎಂದು ಸವಾಲು ಹಾಕಿದ ಅವರು, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಾದರೂ ಅನುದಾನ ಒದಗಿಸಲಿ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕೊರತೆಯಾಗಿದೆ ಎಂಬ ಆರೋಪಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಎಲ್ಲಾ ಶಾಸಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನಿರೀಕ್ಷೆ ಮಾಡುವುದು ತಪ್ಪಲ್ಲ. ಅಂದು ಬಿಜೆಪಿ ಸರಕಾರ ಇದ್ದಾಗಲೂ ಕೂಡಾ ನಮಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಎಸಗಲಾಗಿತ್ತು. ಈ ಬಗ್ಗೆ ನಾನು ಹಲವಾರು ಬಾರಿ ಹೇಳಿದ್ದೇನೆ ಎಂದರು.

ಸಚಿವ ಸಂಪುಟ ನಿರ್ಣಯಗಳ ವರದಿ :

ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಜಾರಿ ಬಗ್ಗೆ ಸದನದಲ್ಲೆ ಸಮಗ್ರ ಮಾಹಿತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸಿಎಂ ಗಾದಿ ತಪ್ಪಿದ್ದಕ್ಕೆ ವಿಷಾದ ಇಲ್ಲ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮಗೆ ಮುಖ್ಯಮಂತ್ರಿ ಪದವಿ ಸಿಗದಿರುವ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಲ್ಲಿಕಾರ್ಜುನ ಖರ್ಗೆಯವರ ಸಂಪೂರ್ಣ ವಿಡಿಯೋ ನೋಡಿದಾಗ ಮಾತ್ರ ಅವರ ಮಾತಿನ ಹಿನ್ನೆಲೆ ಅರ್ಥ ಆಗುತ್ತದೆ. ಪಕ್ಷಕ್ಕಾಗಿ ಅವರು ದುಡಿದಿದ್ದಾರೆ. ಇಲ್ಲಿಂದ ದಿಲ್ಲಿಯವರೆಗೆ ಮುಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಗಾದಿ ತಪ್ಪಿರುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವುದೇ ವಿಷಾದ ಇಲ್ಲ. ಅವರ ಮುಂದಿನ ರಾಜಕೀಯ ಜೀವನದ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಗೌರವಿಸುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸುರ್ಜೆವಾಲಾ ಬದಲು ಸಂತೋಷ್‌ ಸಭೆ ಮಾಡಬೇಕಿತ್ತಾ?:

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಚಿವರ ಸಭೆ ಕರೆದಿರುವುದಕ್ಕೆ ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರ ಸಭೆಯನ್ನು ಸುರ್ಜೆವಾಲಾ ಬದಲಿಗೆ ದತ್ತಾತ್ರೇಯ ಹೊಸಬಾಳೆ ಅಥವಾ ಸಂತೋಷ್‌ ಕರೆಯಬೇಕಿತ್ತಾ? ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News