ಚಿಂಚೋಳಿ: ತಾಲೂಕಿನ ಕಲ್ಲೂರು ರಸ್ತೆ ಸಮೀಪದಲ್ಲಿರುವ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆಯಲ್ಲಿ ಸ್ಥಳೀಯ ಟಿಪ್ಪರ್ ಹಾಗೂ ಲಾರಿ ಮಾಲೀಕರಿಗೆ ಸಾರಿಗೆ ಕೆಲಸದಲ್ಲಿ ಆದ್ಯತೆ ನೀಡಬೇಕು. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೂಲನಿವಾಸಿ ವಾಹನ ಚಾಲಕರ ಸಂಘ ಮತ್ತು ಲಾರಿ ಮಾಲೀಕರ ಸಂಘ ಆಗ್ರಹಿಸಿವೆ.

ಮೂಲ ನಿವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿ ಗಂಜಗಿರಿ ಮಾತನಾಡಿ, ಸ್ಥಳೀಯ ವಾಹನ ಮಾಲೀಕರು ಬ್ಯಾಂಕ್‌ಗಳಿಂದ ಸಾಲ ಪಡೆದು ವಾಹನಗಳನ್ನು ಖರೀದಿಸಿದ್ದಾರೆ. ಸಾಲದ ಕಂತುಗಳು, ಡೀಸೆಲ್ ವೆಚ್ಚ, ವಿಮೆ, ತೆರಿಗೆ, ವಾಹನ ನಿರ್ವಹಣೆ ಹಾಗೂ ಚಾಲಕರ ವೇತನ ಸೇರಿದಂತೆ ಹಲವು ಆರ್ಥಿಕ ಹೊರೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯರಿಗೆ ಸಮರ್ಪಕವಾಗಿ ಸಾರಿಗೆ ಕೆಲಸ ದೊರೆಯದಿದ್ದರೆ ಅವರ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಲಿದೆ ಎಂದು ತಿಳಿಸಿದರು.

ಕಾರ್ಖಾನೆಗೆ ಕಚ್ಚಾ ಸಾಮಗ್ರಿಗಳ ಸಾಗಣೆ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸಗಳಲ್ಲಿ ಸ್ಥಳೀಯ ವಾಹನ ಮಾಲೀಕರು ಹಾಗೂ ಚಾಲಕರಿಗೆ ಮೊದಲ ಆದ್ಯತೆ ನೀಡಬೇಕು. ಸಾರಿಗೆ ಗುತ್ತಿಗೆ ಮತ್ತು ಕೆಲಸ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಸ್ಥಳೀಯ ವಾಹನ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಗಣಿಗಾರಿಕೆ ಇಲಾಖೆಯ ಅನುಮತಿ ಹಾಗೂ ರಾಯಲ್ಟಿ ನಿಯಮಗಳನ್ನು ಉಲ್ಲಂಘಿಸಿ ಕಚ್ಚಾ ಸಾಮಗ್ರಿಗಳನ್ನು ಸಾಗಿಸುವ ವಾಹನಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅನುಮತಿ ಪಡೆದ ಗಣಿಗಾರಿಕೆ ಪ್ರದೇಶಗಳಿಂದ ಮಾತ್ರ ಕೆಂಪು ಮಣ್ಣನ್ನು ಸಾಗಿಸುವುದನ್ನು ಖಚಿತಪಡಿಸಬೇಕು. ನಿಯಮಾನುಸಾರ ಸಾಗಣೆ ನಡೆಸುವ ಸ್ಥಳೀಯ ವಾಹನ ಮಾಲೀಕರಿಗೆ ನ್ಯಾಯಯುತ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳು, ಮೂಲಭೂತ ಸೌಲಭ್ಯಗಳು ಹಾಗೂ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿವೆ.

ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬರುವ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತಿವೇಗ ಹಾಗೂ ಅಜಾಗರೂಕ ಚಾಲನೆ ಮಾಡುವಂತಹ ಅಪಾಯಕಾರಿ ವರ್ತನೆಗಳಿಗೆ ಕಡಿವಾಣ ಹಾಕಬೇಕು. ರೈತರು, ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯವಾಗದಂತೆ ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮಸೂದ್ ಸೌದಾಗರ್, ಕಾರ್ಯದರ್ಶಿ ಬಾಬುಮಿಯ್ಯಾ, ಉಪಾಧ್ಯಕ್ಷ ಮಹೇಶ ಕುಸರಂಪಳ್ಳಿ, ಮುಖಂಡರಾದ ಮುಜೀಬ್ ಎಂ.ಎಂ.ಸಿ., ಪ್ರಕಾಶ್ ಭಕ್ತಂಪಳ್ಳಿ, ಗೋವಿಂದ, ಅಮರನಾಥ ಹೂವಿನಬಾವಿ, ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಮೋಹನ ಐನಾಪೂರ ಹಾಗೂ ಪ್ರಮುಖರಾದ ಮೊಬಿನ್, ಪಿಂಟು, ಮತೀನ್, ಸದ್ದಾಂ, ಶಿವಕುಮಾರ ಜಾಬಶೆಟ್ಟಿ, ಸಂತೋಷ, ದಾವುದ್, ಮೋಗಲಪ್ಪ ಬೇಡಕಪಳ್ಳಿ, ಅಶೋಕ, ಸುರೇಶ, ಕಮಲಕರ್, ಶಾಂತಕುಮಾರ್, ಜೈ ಭೀಮ್, ಮಿಥುನ್, ಅನ್ಸಾರ್, ಶಿವರಾಜ್, ಮಾರುತಿ, ಅಹೆಮದ್, ಲೋಕೇಶ್, ತಾನಾಜೀ, ನರಸಿಂಹಲು, ದಿಲೀಪ್ ಸೇರಿದಂತೆ ನೂರಾರು ವಾಹನ ಚಾಲಕರು ಹಾಗೂ ಮಾಲೀಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor