ಕಲಬುರಗಿ: ಭಾರತದಲ್ಲಿ ಅಪಾರ ಔಷಧೀಯ ಗುಣಗಳನ್ನು ಹೊಂದಿರುವ ಸಾವಿರಾರು ಸಸ್ಯ ಪ್ರಭೇದಗಳಿದ್ದು, ಅವುಗಳ ಔಷಧೀಯ ಸಾಮರ್ಥ್ಯವನ್ನು ವೈಜ್ಞಾನಿಕ ಸಂಶೋಧನೆಯ ಮೂಲಕ ಗುರುತಿಸಿ, ಮೌಲ್ಯವರ್ಧಿತ ಉತ್ಪನ್ನಗಳಾಗಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಹಾಗೂ ಪಿತಾಂಬರ್ ಪಂತ್ ರಾಷ್ಟ್ರೀಯ ಪರಿಸರ ಫೆಲೋ ಡಾ. ಆರ್. ರಾಘವೇಂದ್ರ ರಾವ್ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಸ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು: ಶೈಕ್ಷಣಿಕ ಶ್ರೇಷ್ಠತೆಯಿಂದ ಸಾಂಸ್ಥಿಕ ನಾಯಕತ್ವದತ್ತ’ ಎಂಬ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಯುಕೆ ಸಸ್ಯಶಾಸ್ತ್ರ ಸಂಘಕ್ಕೆ ಚಾಲನೆ ನೀಡಲಾಯಿತು ಹಾಗೂ ಸಂಘದ ಲಾಂಛನವನ್ನು ಅನಾವರಣಗೊಳಿಸಲಾಯಿತು.

ದಖನ್ ಪ್ರಸ್ಥಭೂಮಿ, ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ, ಪೂರ್ವ ಹಿಮಾಲಯ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪಗಳು ವೈವಿಧ್ಯಮಯ ಸಸ್ಯ ಸಂಪತ್ತಿನ ನೆಲೆಗಳಾಗಿವೆ. ಇಂತಹ ಅಪಾರ ಜೀವವೈವಿಧ್ಯವನ್ನು ಹೊಂದಿರುವ ಭಾರತದಲ್ಲಿ ಔಷಧೀಯ ಸಸ್ಯಗಳ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ. ಈ ಸಸ್ಯಗಳಲ್ಲಿರುವ ಔಷಧೀಯ ಗುಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಅವುಗಳ ಆಧಾರದ ಮೇಲೆ ಉಪಯುಕ್ತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಭಾರತದ ಸಸ್ಯಶಾಸ್ತ್ರ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುಶ್ರುತ ಮತ್ತು ಚರಕ ಅವರಂತಹ ಪ್ರಾಚೀನ ವೈದ್ಯರು ಔಷಧೀಯ ಸಸ್ಯಗಳ ಗುಣಗಳನ್ನು ಗುರುತಿಸಿ, ಆರೋಗ್ಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಜ್ಞಾನ ಪರಂಪರೆಯನ್ನು ಮುಂದುವರಿಸಲು ದೇಶೀಯ ಔಷಧೀಯ ಸಸ್ಯ ಸಂಪತ್ತನ್ನು ಗುರುತಿಸುವುದು, ಸಂರಕ್ಷಿಸುವುದು ಹಾಗೂ ಅದರ ಸಾಮರ್ಥ್ಯವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಯ ಮೂಲಕ ಬಳಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಶೈಕ್ಷಣಿಕ ಮತ್ತು ಸಂಶೋಧನಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಜ್ಞಾನ, ಕೌಶಲ ಹಾಗೂ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಐಎಫ್‌ಎಸ್ ಅಧಿಕಾರಿ ಟಿ. ವೇಣುಧರ್ ರೆಡ್ಡಿ ಮಾತನಾಡಿ, ಸಸ್ಯಶಾಸ್ತ್ರವು ಪರಿಸರ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಗೆ ಮಾತ್ರ ಸೀಮಿತವಾಗದೆ, ಈ ಕ್ಷೇತ್ರದಲ್ಲಿರುವ ವಿವಿಧ ವೃತ್ತಿ ಅವಕಾಶಗಳನ್ನು ಗುರುತಿಸಬೇಕು. ತಮ್ಮ ಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸುವ ನಿಟ್ಟಿನಲ್ಲಿಯೂ ಚಿಂತಿಸಬೇಕು ಎಂದು ಹೇಳಿದರು.

ಜೀವ ವಿಜ್ಞಾನ ನಿಕಾಯದ ಡೀನ್ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಸತ್ಯನಾರಾಯಣ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ರಾಕೇಶ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಸಿಯುಕೆ ಸಸ್ಯಶಾಸ್ತ್ರ ಸಂಘದ ನೂತನ ಕಾರ್ಯದರ್ಶಿಯಾಗಿ ಡಾ. ಪ್ರಶಾಂತ್ ಕುಮಾರ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಪ್ರೊ. ಪಲ್ಲೆಪೋಗು ರಾಘವಯ್ಯ, ಪ್ರೊ. ರಾಜೀವ್ ಶೇಷ ಜೋಶಿ, ಪ್ರೊ. ವೆಂಕಟ ರಮಣ ದೊಡ್ಡಿ, ಡಾ. ಅದುಶ್ ಭಟ್, ಡಾ. ಕೃಷ್ಣ ಚೈತನ್ಯ, ಡಾ. ಪ್ರಶಾಂತ್ ಕುಮಾರ್, ಡಾ. ಪ್ರಬಂಜನ್ ಗಾಯಿ, ಡಾ. ಸ್ವಾತಿ, ಡಾ. ಕವಿಶಂಕರ್, ಡಾ. ರಶ್ಮಿತಾ, ಡಾ. ಕವಿತಾ ಹಾಗೂ ಡಾ. ಸೀನಮ್ ಸೇರಿದಂತೆ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor