ಕಲಬುರಗಿ: ಶಿಕ್ಷಣದ ಜತೆಗೆ ಸಮಾಜದ ಆಗುಹೋಗುಗಳ ಅರಿವು ಮೂಡಿಸಿ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಶೈಕ್ಷಣಿಕ ಚಿಂತಕ ಕಲ್ಯಾಣಕುಮಾರ ಶೀಲವಂತ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸುವುದು ಹಾಗೂ ಇಲಾಖೆಯ ಇತರ ಕಾರ್ಯಗಳನ್ನು ನಿರ್ವಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದ ಬೋಧನಾ ಕಾರ್ಯಕ್ಕೆ ತೊಂದರೆಯಾಗುತ್ತಿದ್ದು, ಕಲಿಕೆಯ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಿಲ್ಲೆಯ ಕಲಾವಿದರು, ಸಾಹಿತಿಗಳು ಹಾಗೂ ಬರಹಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಪರಿಷತ್ತು ನಿರಂತರವಾಗಿ ಶ್ರಮಿಸುತ್ತಿದೆ ಎಂದರು. ಅ.27 ಮತ್ತು 28ರಂದು ನಗರದಲ್ಲಿ ಕಲಬುರಗಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಬಸವರಾಜ ಚಿನಿವಾರ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶಿವಲೀಲಾ ಎಸ್. ಕಲಗುರ್ಕಿ ಆಶಯ ನುಡಿಗಳನ್ನಾಡಿದರು. ಸಿದ್ಧಲಿಂಗೇಶ್ವರ ಪ್ರಕಾಶನದ ಬಸವರಾಜ ಕೋನೆಕ್, ಸಾಹಿತಿ ಮುಡುಬಿ ಗುಂಡೇರಾವ ಹಾಗೂ ಧರ್ಮರಾಜ ಜವಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರ ಸೇವೆಯನ್ನು ಗುರುತಿಸಿ 15 ಪ್ರತಿಭಾವಂತ ಶಿಕ್ಷಕರಿಗೆ ‘ಸಾರ್ಥಕ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಸೈಯ್ಯದ್ ನಜೀರುದ್ದಿನ್ ಮುತ್ತವಲ್ಲಿ, ವಿಶಾಲಾಕ್ಷಿ ಮಾಯಣ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಕುಪೇಂದ್ರ ಬರಗಾಲಿ, ಕವಿತಾ ಕಾವಳೆ, ಭಾಗ್ಯಶ್ರೀ ಮರಗೋಳ, ಸುನೀತಾ ಮಾಳಗಿ, ಈರಣ್ಣ ಸೋನಾರ, ಶರಣು ಹಾಗರಗುಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor