ಬೆಳೆ ಪರಿಹಾರ ತಾರತಮ್ಯ ಖಂಡಿಸಿ ಆ.11ರಂದು ಕಾಳಗಿ ಬಂದ್‌ಗೆ ರೈತ ಸಂಘ ಕರೆ
ಕಾಳಗಿ: ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆವಿಮೆ ವಿತರಣೆಯಲ್ಲಿ ಸರ್ಕಾರ ಹಾಗೂ ವಿಮಾ ಕಂಪನಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿವೆ ಎಂದು ಆರೋಪಿಸಿ, ಈ ಅನ್ಯಾಯವನ್ನು ಖಂಡಿಸಿ ಆಗಸ್ಟ್ 11ರಂದು (ಮಂಗಳವಾರ) ಕಾಳಗಿ ಬಂದ್‌ಗೆ ರೈತ ಸಂಘ ಮತ್ತು ರೈತ ಸೇನೆ ಕರೆ ನೀಡಿವೆ.
ಈ ಕುರಿತು ಬುಧವಾರ ಕಾಳಗಿ ಪಟ್ಟಣದ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ರೈತ ಸಂಘ ಹಾಗೂ ರೈತ ಸೇನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕಿನ 200ಕ್ಕೂ ಹೆಚ್ಚು ರೈತರು ಭಾಗವಹಿಸಿ ಬಂದ್ ನಡೆಸುವ ನಿರ್ಣಯ ಕೈಗೊಂಡರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡ ವೀರಣ್ಣ ಗಂಗಾಣಿ, ಸಕಾಲದಲ್ಲಿ ಮಳೆಯಾಗದೆ ರೈತರು ಬೆಳೆ ನಷ್ಟ ಅನುಭವಿಸಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ವಿಮಾ ಕಂಪನಿಗಳು ರೈತರೊಂದಿಗೆ ಅನ್ಯಾಯ ಮಾಡುತ್ತಿವೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಬೃಹತ್ ಪ್ರತಿಭಟನೆಯೊಂದಿಗೆ ಕಾಳಗಿ ಬಂದ್‌ಗೆ ಕರೆ ನೀಡಲಾಗಿದೆ. ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಸಭೆಯಲ್ಲಿ ಮಲ್ಲಿನಾಥ ಪಾಟೀಲ, ಶಿವರಾಜ ಶಿವರುದ್ರಯ್ಯ ಸಾಲಿ, ಶೇಖರ ಮಾನಶೆಟ್ಟಿ, ಜಗದೀಶ ಪಾಟೀಲ, ರಾಜು ಸಿಳ್ಳಿನ, ರಮೇಶ ಹೆಬ್ಬಾಳ, ಅಣಿವೀರಪ್ಪ ತೆಂಗಳಿ, ರಾಜಕುಮಾರ ಹೊಸಳ್ಳಿ, ಭೀಮರಾಯ ಮಲಘಾಣ, ಸಿದ್ದು ಪೆದ್ದಿ, ಮಲ್ಲಿಕಾರ್ಜುನ ಪಾಟೀಲ, ಸೋಮಶೇಖರ ಹಲಚೇರಾ, ಗೌರಿಶಂಕರ ಸೂರವಾರ, ಮಲ್ಲಿನಾಥ ತೇಲಿ, ಮೋಹನ ಚಿನ್ನಾ, ಶ್ರೀಮಂತ ಹಡಪದ, ಮನೋಹರ ಬಡಿಗೇರ, ಸಿದ್ದು ಸಾಹು ಸಾಲಹಳ್ಳಿ, ಸುಂದರ ಸಾಗರ, ಕುಪೇಂದ್ರಗೌಡ ರಾಯಕೋಡ, ನಾಗರಾಜ ಕೇಶ್ವಾರ, ಮಲ್ಲು ಪಾಟೀಲ ಹುಳಗೇರಾ, ರೇವಣಸಿದ್ದ ಕಲಶೆಟ್ಟಿ, ರೇವಣಸಿದ್ದ ಚಿದ್ರಿ, ಸಿದ್ದಯ್ಯಸ್ವಾಮಿ ಮಠಪತಿ, ದಯಾಸಾಗರ ಪಾಟೀಲ, ಮಲ್ಲು ದಂಡಗಿ, ಮರಿಲಿಂಗಗೌಡ, ಜಗದೀಶ ರುದನ್ನೂರ, ಕಾಶಪ್ಪಗೌಡ ಚೋಕಾ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.