Kalaburagi | ವಸತಿ ಶಾಲೆಗಳ ಆಹಾರ ವಿಷ ಪ್ರಕರಣಕ್ಕೆ ಸಿಒಡಿ ತನಿಖೆಗೆ ಆಗ್ರಹ; ಆ.11ರಿಂದ ಧರಣಿ ಎಚ್ಚರಿಕೆ
ಕಲಬುರಗಿ: ದಂಡೋತಿ ಹಾಗೂ ಕರಜಗಿ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ಕುರಿತು ಸಿಒಡಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಈ ಘಟನೆಗೆ ಸಂಬಂಧಿಸಿದಂತೆ ಕೇವಲ ಪ್ರಾಂಶುಪಾಲರು, ವಾರ್ಡನ್‌ಗಳು ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕಾದರೆ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಒಡಿ ತನಿಖೆಗೆ ಆದೇಶಿಸಬೇಕು ಹಾಗೂ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 11ರಿಂದ ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯಲ್ಲಿ ವಿಳಂಬ, ಹೊರಗುತ್ತಿಗೆ ವ್ಯವಸ್ಥೆಯಲ್ಲಿನ ಅಕ್ರಮಗಳು ಹಾಗೂ ಲಂಚದ ಆರೋಪಗಳಿಂದ ವಸತಿ ಶಾಲೆಗಳ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಿಂತ ಭ್ರಷ್ಟಾಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕರಜಗಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ದಂಡೋತಿ ಮತ್ತು ಕರಜಗಿ ವಸತಿ ಶಾಲೆಗಳ ಆಹಾರ ವಿಷ ಪ್ರಕರಣದ ಸಂಪೂರ್ಣ ಸತ್ಯಾಂಶ ಬಹಿರಂಗವಾಗಬೇಕಾದರೆ ಸಿಒಡಿ ತನಿಖೆ ಅನಿವಾರ್ಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರಸಮ್ಮ ಚಂದನಕೆರಾ, ಮೇಘರಾಜ ಕಟಾರೆ, ಪರಶುರಾಮ ಹಡಲಗಿ, ಮುಹಮ್ಮದ್ ಜಮೀರುದ್ದೀನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.