Kalaburagi | ವಿದ್ಯಾರ್ಥಿಗಳು ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಅನ್ವೇಷಣೆ, ಸಂಶೋಧನೆಗೆ ಒತ್ತು ನೀಡಿ : ಪ್ರೊ.ಆರ್.ಆರ್.ಬಿರಾದಾರ್‌

Update: 2026-08-06 18:49 IST

ಕಲಬುರಗಿ: ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗಳು ಹಾಗೂ ನವೀನ ಸಂಶೋಧನೆಗಳನ್ನು ಕೈಗೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆಪಡುವ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಕರೆ ನೀಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗ (ಡಿ.ಎಸ್.ಡಬ್ಲ್ಯು) ವತಿಯಿಂದ ವಿಶ್ವವಿದ್ಯಾಲಯದ 12 ನಿಕಾಯಗಳು ಹಾಗೂ 29 ವಿಭಾಗಗಳಿಗೆ ಹೊಸದಾಗಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಆಯೋಜಿಸಿದ್ದ ಸ್ವಾಗತ–ಪರಿಚಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿಯುಕೆ ದೇಶದಲ್ಲಿಯೇ ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಗುಣಮಟ್ಟದ ಪ್ರಯೋಗಾಲಯಗಳು, ಆಧುನಿಕ ಇ-ಗ್ರಂಥಾಲಯ, ಹಾಸ್ಟೆಲ್, ಅಂತರ್ಜಾಲ ಸೌಲಭ್ಯ, ಅನುಭವಿ ಬೋಧಕ ವೃಂದ ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳು ವಿಶ್ವವಿದ್ಯಾಲಯದಲ್ಲಿವೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಜೊತೆಗೆ ವಿಶ್ವವಿದ್ಯಾಲಯದ ನೀತಿ-ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೀವ ವಿಜ್ಞಾನ ನಿಕಾಯದ ಡೀನ್ ಪ್ರೊ. ಸತ್ಯನಾರಾಯಣ, ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪ್ರೊ. ಆರ್.ಎಸ್. ಹೆಗಡಿ, ರಸಾಯನಶಾಸ್ತ್ರ ನಿಕಾಯದ ಡೀನ್ ಪ್ರೊ. ಪಲ್ಲೆಪೋಗು ರಾಘವಯ್ಯ, ಇಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ. ಅಮರೇಂದ್ರ ಮತ್ಸ, ಭೂವಿಜ್ಞಾನ ನಿಕಾಯದ ಡೀನ್ ಪ್ರೊ. ಪ್ರಶಾಂತ ಹಾಗೂ ಭೌತಿಕ ವಿಜ್ಞಾನ ನಿಕಾಯದ ಡೀನ್ ಪ್ರೊ. ರಾಜೀವ್ ಜೋಶಿ ಅವರು ತಮ್ಮ ವಿಭಾಗಗಳ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಅವಕಾಶಗಳು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ವಿದ್ಯಾರ್ಥಿ ಕಲ್ಯಾಣ ಮತ್ತು ಕಾನೂನು ವಿಭಾಗದ ಡೀನ್ ಪ್ರೊ. ಬಸವರಾಜ್ ಎಂ. ಕುಬಕಡ್ಡಿ ಅವರು ವಿಶ್ವವಿದ್ಯಾಲಯದ ನೀತಿ-ಸಂಹಿತೆ, ಶಿಸ್ತು ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಗಳ ಕುರಿತು ವಿವರಿಸಿದರು. ಹಾಸ್ಟೆಲ್ ಮುಖ್ಯಸ್ಥ ಡಾ. ಬಸವರಾಜ ಅವರು ವಸತಿ ಸೌಲಭ್ಯ ಮತ್ತು ಹಾಸ್ಟೆಲ್ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಜನಾರ್ಧನ ರೆಡ್ಡಿ, ಪ್ರೊ.ನಾಗರಾಜ ಧಾರವಾಡಕರ, ಪ್ರೊ.ಚೈತನ್ಯ, ಪ್ರೊ.ವೆಂಕಟರಮಣ ದೊಡ್ಡಿ, ಪ್ರೊ.ಪ್ರಮೋದ್, ಪ್ರೊ.ರಾಜಶ್ರೀ ಹಾಗೂ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಿಬ್ಬಂದಿಗಳಾದ ಚರಣ್, ಅರುಣ್‌ಕುಮಾರ್ ಸೇರಿದಂತೆ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು. ವಂದೇ ಮಾತರಂ ಗಾಯನದೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News