ಎಸ್‌ಐಆರ್ ಪ್ರಕ್ರಿಯೆ | ಎಎಸ್‌ಡಿಡಿ ಪಟ್ಟಿಯಲ್ಲಿ ಹೆಸರು ಇದ್ದರೆ ತಕ್ಷಣ ಸರಿಪಡಿಸಿಕೊಳ್ಳಿ : ದಸ್ತಗೀರ್ ಅಹ್ಮದ್
ಕಲಬುರಗಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಎ.ಎಸ್.ಡಿ.ಡಿ (Absent, Shifted, Dead, Duplicate) ಪಟ್ಟಿಗೆ ಸೇರಿರುವ ಮತದಾರರು ಯಾವುದೇ ನಿರ್ಲಕ್ಷ್ಯ ವಹಿಸದೆ ತಮ್ಮ ಹೆಸರುಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ತಕ್ಷಣವೇ ಸರಿಪಡಿಸಿಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಸ್ತಗೀರ್ ಅಹ್ಮದ್ ಕರೆ ನೀಡಿದರು.
ನಗರದ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ–15ರ ಸಬಾ ಫಂಕ್ಷನ್ ಹಾಲ್‌ನಲ್ಲಿ ಬಡಾವಣೆಯ ನಾಗರಿಕರೊಂದಿಗೆ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಅಥವಾ ಎ.ಎಸ್.ಡಿ.ಡಿ ಪಟ್ಟಿಗೆ ಸೇರ್ಪಡೆಯಾಗಿರುವುದು ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಪ್ರತಿಯೊಬ್ಬ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಎ.ಎಸ್.ಡಿ.ಡಿ ಪಟ್ಟಿಯಲ್ಲಿ ಹೆಸರು ಕಂಡುಬಂದರೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅಥವಾ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೆಸರು ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತದಾನದ ಹಕ್ಕು ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಜಾಗೃತರಾಗಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಮತದಾರರ ಪಟ್ಟಿಯಲ್ಲಿನ ಮಾಹಿತಿಯನ್ನು ಪರಿಶೀಲಿಸಿಕೊಳ್ಳುವ ಮೂಲಕ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಡಾವಣೆಯ ನಾಗರಿಕರು ಭಾಗವಹಿಸಿ ಮತದಾರರ ಪಟ್ಟಿಯ ಪರಿಶೀಲನೆ, ಎ.ಎಸ್.ಡಿ.ಡಿ ಪಟ್ಟಿಯಿಂದ ಹೆಸರು ತೆಗೆಸಿಕೊಳ್ಳುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ ಪಡೆದರು.