ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಆ.10ರಂದು ಕಲಬುರಗಿಯಲ್ಲಿ ಸಿಐಟಿಯು ಬೃಹತ್ ಪ್ರತಿಭಟನೆ
ಕಲಬುರಗಿ: ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವುದು ಸೇರಿದಂತೆ ವಿವಿಧ ಕಾರ್ಮಿಕ ಮತ್ತು ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 10ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸಜ್ಜನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದ ಮೇಲೆ ವೈಜ್ಞಾನಿಕ ಲೆಕ್ಕಾಚಾರದಂತೆ ಪರಿಷ್ಕರಿಸಿದ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಮೇ 22, 2026ರಂದು ಸರ್ಕಾರ ಹೊರಡಿಸಿದೆ. ಆದರೆ ಎರಡು ತಿಂಗಳು ಕಳೆದರೂ ಪರಿಷ್ಕೃತ ವೇತನ ಜಾರಿಯಾಗಿಲ್ಲ. ಇದರಿಂದ ರಾಜ್ಯದ ಸುಮಾರು ಒಂದು ಕೋಟಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರವು ಮಾಲೀಕರ ಒತ್ತಡಕ್ಕೆ ಮಣಿಯದೆ ಕೂಡಲೇ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ರೈತರು ಈಗಾಗಲೇ ಸಾಲದ ಹೊರೆಯಿಂದ ತತ್ತರಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಖಾಸಗೀಕರಣ ನೀತಿಗಳಿಂದ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್, ದಿನಸಿ ಹಾಗೂ ಸಾರಿಗೆ ದರಗಳ ನಿರಂತರ ಏರಿಕೆಯಿಂದ ಜನರ ಜೀವನ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂಸ್ವಾಧೀನ ಮತ್ತು ಕಾರ್ಪೊರೇಟ್ ಭೂ ಕಬಳಿಕೆ ವಿರೋಧಿಸಿ, ಕಾರ್ಮಿಕ ಸಂಹಿತೆಗಳ ಜಾರಿ ಹಿಂಪಡೆಯಲು, ಪರಿಷ್ಕೃತ ಕನಿಷ್ಠ ವೇತನ ಜಾರಿಗೆ, ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಲು, ವಿದ್ಯುತ್ ತಿದ್ದುಪಡಿ ಕಾಯ್ದೆ–2025 ಹಾಗೂ ಬೀಜ ಕಾಯ್ದೆ ಮತ್ತು ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟಿನ ವಿರುದ್ಧವೂ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಐತಿಹಾಸಿಕ “ಕ್ವಿಟ್ ಇಂಡಿಯಾ” ಚಳವಳಿಯ ಸ್ಫೂರ್ತಿಯಿಂದ ಆಗಸ್ಟ್ 10ರಂದು ತಿಮ್ಮಾಪುರ ಚೌಕದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಮುಖಂಡರಾದ ಶಾಂತಾ ಘಂಟಿ, ನಾಗಯ್ಯ ಸ್ವಾಮಿ, ಬಾಬು ಹೂವಿನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.