Chitapur | ಬಸವರಾಜ್ ಪಡುಕೋಟೆ ವಿರುದ್ಧ ಕಠಿಣ ಕ್ರಮ ಬೇಡ; ಬಿಡುಗಡೆಗೆ ಮನವಿ

Update: 2026-07-28 16:48 IST

ಚಿತ್ತಾಪುರ: ಬೆಂಗಳೂರಿನ ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳು ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ವೇಳೆ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿರುವ ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕನ್ನಡಪರ ಹೋರಾಟಗಾರ ಬಸವರಾಜ್ ಪಡುಕೋಟೆ ಅವರನ್ನು ರೌಡಿಗಳಂತೆ ಪರಿಗಣಿಸದೇ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಬೈರೇಗೌಡ ಅವರಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಬಸವರಾಜ್ ಪಡುಕೋಟೆ ಅವರ ಬಗ್ಗೆ ಸಮಗ್ರ ಪರಿಶೀಲನೆ ನಡೆಸದೆ ಕೇವಲ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಆಧರಿಸಿ ಕಠಿಣ ಕ್ರಮಕ್ಕೆ ಮುಂದಾಗುವುದು ಸರಿಯಲ್ಲ ಎಂದು ಹೇಳಿದರು.

ಬೆಂಗಳೂರು ಶಿವಾಜಿನಗರದಲ್ಲಿ ನಡೆದ ಘಟನೆಯ ಬಗ್ಗೆ ವಿಷಾದವಿದೆ. ಆದರೆ ಘಟನೆ ನಡೆದ ವೇಳೆ ಕೆಲ ಅಧಿಕಾರಿಗಳು ಬಸವರಾಜ್ ಪಡುಕೋಟೆ ಅವರೊಂದಿಗೆ ಅಸಭ್ಯ ಹಾಗೂ ನಿಂದನಾತ್ಮಕವಾಗಿ ವರ್ತಿಸಿದ್ದರಿಂದ ಕಾರ್ಯಕರ್ತರು ಮತ್ತು ಕೆಲ ವ್ಯಾಪಾರಸ್ಥರು ಆಕ್ರೋಶಗೊಂಡು ಅನುಚಿತವಾಗಿ ನಡೆದುಕೊಂಡಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕನ್ನಡದ ಬಾವುಟ, ದೇವಸ್ಥಾನ, ಧ್ವಜಸ್ತಂಭ ಸೇರಿದಂತೆ ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಸ್ಥಳೀಯ ಕನ್ನಡಪರ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಿ ಚರ್ಚೆ ನಡೆಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿದರು.

ನಮ್ಮ ಕರ್ನಾಟಕ ಸೇನೆ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದೆ. ಆದರೆ ಈ ಘಟನೆಯಲ್ಲಿ ಕೇವಲ ಬಸವರಾಜ್ ಪಡುಕೋಟೆ ಹಾಗೂ ವ್ಯಾಪಾರಸ್ಥರನ್ನಷ್ಟೇ ಹೊಣೆಗಾರರನ್ನಾಗಿ ಮಾಡದೇ, ಅಧಿಕಾರಿಗಳ ವರ್ತನೆಯನ್ನೂ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ವಾಡಿ ವಲಯ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, ಕಳೆದ ಸುಮಾರು 30 ವರ್ಷಗಳಿಂದ ಕನ್ನಡ ನಾಡು, ನುಡಿ ಮತ್ತು ಗಡಿಯ ವಿಚಾರವಾಗಿ ಹೋರಾಟ ನಡೆಸುತ್ತಿರುವ ಬಸವರಾಜ್ ಪಡುಕೋಟೆ ಅವರನ್ನು ಕನ್ನಡಪರ ಹೋರಾಟಗಾರರೆಂದು ಪರಿಗಣಿಸಿ, ಅವರ ವಿರುದ್ಧ ಅತಿಯಾದ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಮಾನವೀಯ ದೃಷ್ಟಿಯಿಂದ ಅಲ್ಪ ಪ್ರಮಾಣದ ಶಿಕ್ಷೆ ನೀಡಿ ಕ್ಷಮಿಸಿ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್ ಸಿಂದಗಿ, ಸಂಘಟನಾ ಸಂಚಾಲಕ ಅಂಬರೀಷ ಮಾಳಗಿ, ಪ್ರಭು ಹಲಕರ್ಟಿ, ನಾಗರಾಜ ಬನಸೋಡೆ, ಪ್ರಭಾಕರ ಪೂಜಾರಿ, ಶಶಿಸಾಗರ, ರವೀಂದ್ರ, ಜೈ ಭೀಮ ವಾಲೇಕ‌ರ್, ಬಸವರಾಜ ಗುತ್ತೇದಾರ, ಪ್ರೇಮ್ ಜೋಶಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News