ರಾಜ್ಯದಲ್ಲಿಯೇ ಚಿತ್ತಾಪುರ ಮಾದರಿ ಕ್ಷೇತ್ರವಾಗಲಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಳೆದ ಒಂದೂವರೆ ವರ್ಷದಿಂದ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಚಿತ್ತಾಪುರ ಕ್ಷೇತ್ರದ ಪ್ರತಿ ಹಳ್ಳಿ ಅಭಿವೃದ್ಧಿಗಾಗಿ ನೀಲಿನಕ್ಷೆ ತಯಾರಿಸಲಾಗಿದ್ದು, ಮುಂದಿನ ಎರಡು ವರ್ಷದಲ್ಲಿ ಅಭಿವೃದ್ಧಿಯ ಪರ್ವ ಚಿತ್ತಾಪುರ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಅವರು ಚಿತ್ತಾಪುರ ಪಟ್ಟಣದಲ್ಲಿ18.41 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಜಾಸೌಧ ಕಟ್ಟಡ ಉದ್ಘಾಟಿಸಿ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 517 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಚಿತ್ತಾಪುರ ಹಾಗೂ ವಾಡಿಗೆ ಸಂಬಂಧಿಸಿದಂತೆ ಇನ್ನೊಂದೆರೆಡು ತಿಂಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಚಿತ್ತಾಪುರ ಕ್ಷೇತ್ರದ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗಾಗಿ ಪ್ರತಿ ಹಳ್ಳಿಗೂ 10 ಕೋಟಿ ರೂ. ನಂತೆ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ಹಳ್ಳಿ ಅಭಿವೃದ್ಧಿಗಾಗಿ ಇಡಿ ರಾಜ್ಯದಲ್ಲಿಯೇ ಚಿತ್ತಾಪುರದಲ್ಲಿ ರಾಜ್ಯಕ್ಕೆ ಮಾದರಿಯಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದರು.
ಇಂದು ಚಿತ್ತಾಪುರದಲ್ಲಿ 8 ರಿಂದ 10 ವಿವಿಧ ಭೂ ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಿವಿಧ ರೀತಿಯ ಆಸ್ತಿಗಳ ಡಿಜಿಟಲ್ ಹಕ್ಕು ಪತ್ರಗಳನ್ನು ವಿತರಿಸಲು ಚಾಲನೆ ನೀಡಲಾಗಿದೆ. ಇ-ಸ್ವತ್ತಿನ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಂಡು ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡವರಿಗಾಗಿ ಮನೆ ಬಾಗಿಲನಲ್ಲಿ ಹಕ್ಕು-ಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ಮುಂದಿನ ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿಯಲ್ಲಿ 50 ಕೋಟಿ ರೂ. ಅನುದಾನವನ್ನು ಚಿತ್ತಾಪುರದ ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದ ಸಚಿವರು, ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಅಮುಲಾಗ್ರ ಬದಲಾವಣೆ ತರಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಾರ್ವಜನಿಕರಿಗೆ ತ್ವರಿತಗತಿಯಾಗಿ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಅನ್ವಯ ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ನಂಬರ್ ಒನ್ ಎಂದು ಹೇಳಿದೆ. ರಾಜ್ಯ ಸರ್ಕಾರ ಸಹ ದೇಶದಲ್ಲಿಯೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿನ ನೂತನ ಯೋಜನೆಗಳು ಹೇಳುತ್ತಿವೆ. ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳ ಸೃಜನೆ ಮಾಡಲಾಗಿದ್ದು, 15 ಲಕ್ಷ ಕಾಮಗಾರಿಗಳು ನಡೆದು 47 ಲಕ್ಷ ಕುಟುಂಬಗಳಿಗೆ ಅನುಕೂಲವಾಗಿದೆ. ನಮ್ಮ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಲಬುರಗಿ ರೊಟ್ಟಿ ಬಗ್ಗೆ ಮಾತಾಡಿದ್ದಕ್ಕೆ ಪ್ರಧಾನಿಗೆ ಧನ್ಯವಾದ:
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿಗಳು ಕಲಬುರಗಿ ರೊಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಪ್ರಧಾನಿಯವರು ಮಹಿಳೆಯರ ಸ್ವಾವಲಂಬಿ ಜೀವನದ ಬಗ್ಗೆ ಕೊಂಡಾಡಿದ್ದಾರೆ, ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಂತಹ ಸಾಧನೆ ಮಾಡಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಪ್ರೋತ್ಸಾಹ ರೂಪದಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದರು.
ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣಗಳ ಅಭಿವೃದ್ದಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ. ಇದಕ್ಕೆ ಸಂಸದರ ಆಶೀರ್ವಾದ ಬೇಕಾಗುತ್ತದೆ. ವಾಡಿ ಹಾಗೂ ಚಿತ್ತಾಪುರ ಅಭಿವೃದ್ದಿಗೆ ತಲಾ100 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ವೇದಿಕೆಯ ಮೇಲಿದ್ದ ಅದಾನಿ ಸಿಮೆಂಟ್ಸ್ ಕಂಪನಿಯ ಸಿ ಎಸ್ ಆರ್ ಫಂಡ್ ಅಧಿಕಾರಿಗಳಿಗೆ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಾಸಕರಾದ ಎಂ ವೈ ಪಾಟೀಲ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮಾತನಾಡಿದರು.
ವೇದಿಕೆಯ ಮೇಲೆ ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಂ ವೈ ಪಾಟೀಲ್, ಎಂಎಲ್ ಸಿ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಅನ್ನಪೂರ್ಣ ನಾಗಪ್ಪ ಕಲ್ಲಕ್, ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಎಸಿ ಪ್ರಭುರೆಡ್ಡಿ, ರಮೇಶ್ ಮರಗೋಳ, ಶಿವಾನಂದ ಪಾಟೀಲ, ನಾಗರೆಡ್ಡಿಕರದಾಳ, ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಮಹೇಮೂದ್ ಸಾಹೇಬ್, ಅಝೀಝ್ ಸೇಠ ರಾವೂರು, ಸೇರಿದಂತೆ ಹಲವರಿದ್ದರು.