ವಿಶೇಷ ಪರಿಹಾರದ ಪ್ಯಾಕೇಜ್‌ಗಾಗಿ 2,200 ಕೋಟಿ ರೂ. ನೀಡುವಂತೆ ಕೇಂದ್ರಕ್ಕೆ ಮನವಿ : ಸಿಎಂ ಸಿದ್ದರಾಮಯ್ಯ
ಕಲಬುರಗಿ : ಉತ್ತರ ಕರ್ನಾಟಕ ಪ್ರದೇಶದಲ್ಲಿ ನೆರೆ ಪ್ರವಾಹದಿಂದ ಆಗಿರುವ ಬೆಳೆ, ಜೀವ ಹಾನಿಯ ಪರಿಹಾರಕ್ಕಾಗಿ 2,200 ಕೋಟಿ ರೂ. ವಿಶೇಷ ಪ್ಯಾಕೇಜ್ ಗಾಗಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಸಚಿವ, ಶಾಸಕ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿಶೇಷ ಪರಿಹಾರದ ಪ್ಯಾಕೇಜ್‌ಗಾಗಿ 2,200 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಮಹಾರಾಷ್ಟ್ರಕ್ಕೆ ಕೊಡುವ ಮಾದರಿಯಲ್ಲೇ ರಾಜ್ಯಕ್ಕೂ ಪರಿಹಾರ ಹಣವನ್ನು ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲು ಸಭೆ ತೀರ್ಮಾನಿಸಲಾಗಿದೆ ಎಂದರು.
SDRF ಪ್ರಕಾರ ಪರಿಹಾರದ ಜೊತೆಗೆ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎನ್ನುವ ಬೇಡಿಕೆ ಇದೆ. ಹೆಕ್ಟೇರ್ ಗೆ 8500 ರೂ., ತರಿ ನೀರಾವರಿ ಜಮೀನಿಗೆ 17 ಸಾವಿರ ರೂ., ಕೆರೆ ಕ್ರಾಪ್ ಗೆ 22,500 ರೂ. ಸಮೀಕ್ಷೆ ಮುಗಿದ ತಕ್ಷಣ ಈ ಮಾನದಂಡದಲ್ಲಿ ಪರಿಹಾರ ಬಿಡುಗಡೆಗೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ ಇವರೆಗೆ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿರುವ ಅಂದಾಜಿದೆ. ಇದುವರೆಗೂ 5 ಲಕ್ಷ ಹೆಕ್ಟೇರ್ ಮಾತ್ರ ಜಂಟಿ ಸಮೀಕ್ಷೆಯಾಗಿದೆ, 5 ಲಕ್ಷ ಹೆಕ್ಟೇರ್ ಸಮೀಕ್ಷೆಗೆ ಬಾಕಿಯಿದೆ. ಸರಿಯಾದ ಸಮೀಕ್ಷೆ ಮುಗಿದ ಬಳಿಕ ಕೃಷಿ ವಿಮೆ ಸಮರ್ಪಕವಾಗಿ ಒದಗಿಸುವಂತೆ ವಿಮಾ ಕಂಪನಿಗಳಿಗೆ ಸೂಚನೆ ನೀಡಬೇಕು. ಜಿಲ್ಲಾಧಿಕಾರಿಗಳು ಬ್ಯಾಂಕರ್ ಗಳ ಜೊತೆಗೆ ಚರ್ಚಿಸಬೇಕು. ಸಂತ್ರಸ್ಥ ರೈತರ ನೆರವಿಗೆ ಧಾವಿಸುವಂತೆ ಸೂಚಿಸಿದರು.
ಸದ್ಯ ಜನ, ಜನವಾರು ಪ್ರಾಣ ಹಾನಿ ಬಗ್ಗೆ ಸಮೀಕ್ಷೆ ಸಿಕ್ಕಿದೆ. ಆದರೆ ಪೂರ್ಣ ಸಮೀಕ್ಷೆ ಆಗಿಲ್ಲದ ಕಾರಣದಿಂದ ಮನೆಗಳ ಹಾನಿ ಬಗ್ಗೆ ಪೂರ್ಣ ವರದಿ ಇಲ್ಲ. ಸಮೀಕ್ಷೆ ಬಳಿಕ ಸರಿಯಾದ ಲೆಕ್ಕ ಸಿಗುತ್ತದೆ. ಆಗ ಎಲ್ಲಾ ಸಂತ್ರಸ್ಥರಿಗೂ ಪರಿಹಾರ ನೀಡಲು ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಅಡೆತಡೆಯಾಗದೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಲು ಕಾರ್ಯ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಹೇಳಿದರು.
ಹೆಚ್ಚಿನ ಮಳೆಯಿಂದ ಸಂಪರ್ಕ ರಸ್ತೆಗಳು, ಸೇತುವೆ, ಬ್ಯಾರೇಜ್ ಗಳು ತುಂಬಾ ಹಾನಿಯಾಗಿವೆ, ಮುಳುಗಡೆಯಾಗಿವೆ. ಹೀಗಾಗಿ ಈ ಬಗ್ಗೆಯೂ ಸಮೀಕ್ಷೆ ಮಾಡಿ ವರದಿ ನೀಡಬೇಕು, ಮುಂಬರುವ ದಿನಗಳಲ್ಲಿ ಅವುಗಳ ರಿಪೇರಿ, ಹೊಸ ಕಾಮಗಾರಿಗೆ ರೂಪರೇಷೆಗಳನ್ನು ಹಾಕಬೇಕು ಎಂದು ತಿಳಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುವ ಅಪಾಯವಿದ್ದು, ಆರೋಗ್ಯ ರಕ್ಷಣೆಗೆ ಗಮನ ಹರಿಸಿ. ಶಾಲಾ ಮಕ್ಕಳ ಹಾಸ್ಟೆಲ್ ಗಳಲ್ಲಿ ಆರೋಗ್ಯ ತಪಾಸಣೆ ಕಡ್ಡಾಯವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಮಳೆಯಲ್ಲಿ ದಾಖಲೆಗಳು, ಗುರುತಿನ ಚೀಟಿ ಕೊಚ್ಚಿ ಹೋಗಿರುವ , ಹಾಳಾಗಿರುವುದು ವರದಿಯಾಗಿದೆ. ಆ ಜನರು ಆತಂಕ ಪಡುವ ಅಗತ್ಯ ಇಲ್ಲದಂತೆ ಅಭಿಯಾನದ ರೂಪದಲ್ಲಿ ಹೊಸ ಗುರುತಿನ ಚೀಟಿ, ದಾಖಲೆಗಳು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ವೈದ್ಯಕೀಯ ಶಿಕ್ಷಣ, ಕೌಶಾಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ್ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ ಪಾಟೀಲ, ಜಗದೇವ ಗುತ್ತೇದಾರ, ಇಂಧನ ಇಲಾಖೆಯ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕೆ.ಪಿ.ಟಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಇದ್ದರು.