×
Ad

ಕುಡಿಯುವ ನೀರು ಯೋಜನೆ ಕಾಮಗಾರಿ ವಿಳಂಬ ಆರೋಪ : ಎಲ್ & ಟಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಸಚಿವ ಪ್ರಿಯಾಂಕ್ ಖರ್ಗೆ ಶಿಫಾರಸು

Update: 2025-05-13 14:28 IST

ಕಲಬುರಗಿ : ಕಲಬುರಗಿ ನಗರಕ್ಕೆ ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಳಿಸದೇ ವಿಳಂಬ ಧೋರಣೆ ತಾಳುತ್ತಿರುವ ಎಲ್ & ಟಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಕೂಡಲೇ ವರದಿ ಸಲ್ಲಿಸುವಂತೆ ಮಹಾನಗರ ಪಾಲಿಕೆ ಅಯುಕ್ತ ಅವಿನಾಶ ಶಿಂಧೆ ಅವರಿಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ‌ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.

ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ನಗರದಲ್ಲಿ 24 ಗಂಟೆ ನಿರಂತರ ಕುಡಿಯುವ ನೀರು ಯೋಜನೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಎಲ್ & ಟಿ ಕಂಪನಿ ಕೆಲಸಗಳು ಕಾಲಮಿತಿಯಲ್ಲಿ ಪೂರ್ಣವಾಗುತ್ತಿಲ್ಲ. ಇದರ ಮೇಲುಸ್ತುವಾರಿ ಮಾಡಬೇಕಾದ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಇಂಜಿನಿಯರ್ ಗಳು ನೀವೇನು ಮಾಡುತ್ತಿದ್ಧಿರಿ ಎಂದು ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿ ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ. ಸಾವಿರಾರು ಸಂಖ್ಯೆಯಲ್ಲಿ ಇರಬೇಕಾದ ಕಾರ್ಮಿಕರ ಸಂಖ್ಯೆಯಲ್ಲಿ ಇಲ್ಲಿರುವುದು 170 ರಿಂದ 300 ಅಷ್ಟೆ. ಇದರ ಮೇಲೆ ತೀವ್ರ ನಿಗಾ ಇರಿಸಬೇಕಾದ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಇಂಜಿನೀಯರ್ ಗಳು ಎಲ್ & ಟಿ ಅವರು ಕೆಲಸ ಮಾಡುತ್ತಾರೆ ನಮ್ಮದ್ದೇನಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ಇದು ನಡೆಯೋದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಆದೇಶ ಮಾಡಿದರು.

ಕಾಮಗಾರಿ ಸ್ಥಳಕ್ಕೆ ಎಂದಾದರು ಭೇಟಿ ನೀಡಿದ್ದೀರಾ, ನಿಗದಿಯಂತೆ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ವೀಕ್ಷಿಸಿದ್ದೀರಾ ಎಂದು ಇಂಜಿನೀಯರ್ ಗಳನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕಾಮಗಾರಿ ವಿಳಂಬ ಸಂಬಂಧ ಕಂಪನಿಗೆ ಪಾಲಿಕೆಯಿಂದ ನೀಡಿದ ನೋಟಿಸ್, ಶಿಸ್ತು ಕ್ರಮ ಸೇರಿದಂತೆ ಇಂಜಿನಿಯರ್ ಗಳಿಗೆ ನೀಡಲಾದ ಜವಾಬ್ದಾರಿ ಕುರಿತು ಸಹ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.

ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಮಾತನಾಡಿ, ನಗರದ ಚರಂಡಿ ನೀರು ಸರಡಗಿ ಬ್ಯಾರೇಜ್ ಸೇರುತ್ತಿದೆ ಎಂಬ ದೂರಿದ್ದು, ಕಲುಷಿತ ನೀರು ಹೋಗದಂತೆ ಎಚ್ಚರ ವಹಿಸಬೇಕು ಎಂದರು.

ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್‌ ಮಾತನಾಡಿದರು.

ಕಾಮಗಾರಿ ವಿಳಂಬಕ್ಕೆ ಉಪಗುತ್ತಿಗೆ ಕಾರಣ :

ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ ಮಾತನಾಡಿ, ಎಲ್ & ಟಿ ಕಂಪನಿಯು ಉಪಗುತ್ತಿಗೆ ನೀಡಿದೆ. ಇನ್ನು ಸದರಿ ಗುತ್ತಿಗೆದಾರರಿಗೆ ಸರಿಯಾಗಿ ಪೇಮೆಂಟ್ ಮಾಡದ ಕಾರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿ ಮಾತ್ರ ಕಂಪನಿಗೆ ನೀಡಿ ನಿರ್ವಹಣೆ ಜವಾಬ್ದಾರಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಗೆ ನೀಡಿದರೆ ಅನುಕೂಲವಾಗಲಿದೆ. ಇದು ಹೀಗೆ ಸಾಗಿದರೆ ಇನ್ನು 2 ವರ್ಷವಾದರೂ ಕಾಮಗಾರಿ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ ಎಂದರು.

ಸಭೆಯಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಕರ್ನಾಟಕ ರೇಷ್ಮೆ ಅಭಿವೃದ್ದಿ ನಿಗಮ‌ ನಿಯಮಿತದ ಅಧ್ಯಕ್ಷರು ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್,‌ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕೆ.ಯು.ಐ.ಎಫ್.ಡಿ.ಸಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ, ಎಲ್ & ಟಿ ಕಂಪನಿಯ ಕುಮಾರನ್ ಸೇರಿದಂತೆ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿಯ ಇತರೆ ಅಧಿಕಾರಿಗಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News