×
Ad

ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಅವಧಿ ವಿಸ್ತರಣೆ: ಸದುಪಯೋಗಪಡಿಸಿಕೊಳ್ಳುವಂತೆ ರೈತರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ

Update: 2025-05-04 14:20 IST

ಕಲಬುರಗಿ: 2024-25 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರಿನ ಹಂಗಾಮಿನಲ್ಲಿ ತೊಗರಿ ಖರೀದಿಯ ಅವಧಿ ಮೇ 31 ರವರೆಗೆ ವಿಸ್ತರಿಸಲಾಗಿದ್ದು, ರೈತ ಬಾಂಧವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ಒಟ್ಟು 6.27 ಲಕ್ಷ ಹೆಕ್ಟರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಸುಮಾರು 50 ಲಕ್ಷ ಕ್ವಿಂಟಾಲ್‌ ಇಳುವರಿ ನಿರೀಕ್ಷಿಸಲಾಗಿರುತ್ತದೆ.

ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ರೂ.7550/- ಪ್ರತಿ ಕ್ವಿಂಟಾಲಗೆ ನಿಗದಿಪಡಿಸಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ರೂ.450/- ಪ್ರತಿ ಕ್ವಿಂಟಾಲಗೆ ಸೇರಿಸಿ ಒಟ್ಟು ಪ್ರತಿ ಕ್ವಿಂಟಾಲ್‌ಗೆ ರೂ.8,000/- ದರ ನಿಗದಿ ಪಡಿಸಿದೆ. ಪ್ರತಿ ಎಕರೆಗೆ 4 ಕ್ವಿಂಟಾಲ್‌ ರಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್‌ ವರೆಗೆ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತಿ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಕಲಬುರಗಿ ಸಂಸ್ಥೆಗಳನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ. ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 189 ಖರೀದಿ ಕೇಂದ್ರಗಳನ್ನು ತೆರೆದು ತೊಗರಿಯನ್ನು ಖರೀದಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ನಿಗದಿತ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ, ಕಲಬುರಗಿ ಸಂಸ್ಥೆಯವರು 33,518 ರೈತರ ನೋಂದಣಿಯನ್ನು ಕೈಗೊಂಡಿರುತ್ತಾರೆ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಯವರು 14,730 ರೈತರ ನೊಂದಣಿಯನ್ನು ಕೈಗೊಂಡಿರುತ್ತಾರೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 48,248 ರೈತರ ನೊಂದಣಿಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 34,660 ರೈತರಿಂದ ಒಟ್ಟು 5,21,648 ಕ್ವಿಂಟಾಲ್‌ ತೊಗರಿಯನ್ನು ಖರೀದಿಸಿ ರೂ. 417.31 ಕೋಟಿ ಹಣ ಪಾವತಿಸಲಾಗಿದೆ. ಇಲ್ಲಿಯವರೆಗೆ 34,660 ಜನ ರೈತರು ಸದರಿ ಯೋಜನೆಯ ಲಾಭವನ್ನು ಪಡೆದಿರುತ್ತಾರೆ.

ಏಪ್ರಿಲ್ 30 ರಂದು ಬಿಡುಗಡೆ ಮಾಡಲಾದ ಆದೇಶದಂತೆ ದಿ:30-04-2025 ರನ್ವಯ ಜಿಲ್ಲೆಯಲ್ಲಿ ಈಗಾಗಲೆ ನೊಂದಣಿಯಾಗಿ ತೊಗರಿ ಮಾರಾಟ ಮಾಡದೆ ಬಾಕಿ ಉಳಿದಿರುವ ಒಟ್ಟು 13,588 ರೈತರಿಂದ 3,22,969 ಕ್ವಿಂಟಾಲ್‌ ತೊಗರಿ ಖರೀದಿಮಾಡಲು ಕಾಲಾವಧಿಯನ್ನು ಮೇ 31 ರವರೆಗೆ ವಿಸ್ತರಿಸಿ ಸರಕಾರದಿಂದ ಆದೇಶಿಸಲಾಗಿದೆ.‌ ಈ ಆದೇಶದ ಪ್ರಕಾರ ಈಗಾಗಲೇ ನೋಂದಣಿ ಮಾಡಿದ ರೈತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಹೊಸ ರೈತರ ನೊಂದಣಿಗೆ ಅವಕಾಶ ಇರುವುದಿಲ್ಲ. ಕಾರಣ ಜಿಲ್ಲೆಯ ರೈತಬಾಂಧವರು ತೊಗರಿ ಮಾರಾಟ ಮಾಡಲು ತಮ್ಮ ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತೊಗರಿಯನ್ನು ಮಾರಾಟ ಮಾಡಿ ಸದರಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News