ಕಾಳಗಿ | ಶಾಂತಿಯುತವಾಗಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ
ಕಲಬುರಗಿ : ಕಾಳಗಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯು ಶಾಂತಿಯುತವಾಗಿ ನಡೆಯಿತು.
ಆಯಾ ಪರೀಕ್ಷೆ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳು ಬರೆಯುವ ಪರೀಕ್ಷೆ ಮೇಲೆ ಹದ್ದಿನ ಕಣ್ಗಾವಲು ವಹಿಸಿದ್ದವು. ಹೀಗಾಗಿ, ಪರೀಕ್ಷೆಯಲ್ಲಿ ಡಿಬಾರ್ ಅಥವಾ ಕಾಫಿ ಚೀಟಿ ಹೊಡೆಯುವಂತಹ ಪ್ರಕರಣಗಳು ಬೆಳಕಿಗೆ ಬಂದಿಲ್ಲ ಎಂದು ಮುಖ್ಯ ಪರೀಕ್ಷಾ ಅಧಿಕ್ಷಕ ಶ್ರೀಶೈಲ ಬೋನಾಳ ತಿಳಿಸಿದ್ದಾರೆ.
ಶನಿವಾರ ಮೊದಲನೆಯ ದಿನ ನಡೆದ ಕನ್ನಡ ವಿಷಯ ಪರೀಕ್ಷೆಯಲ್ಲಿ ರೇವಗ್ಗಿ, ಮಾಡಬೂಳ, ಟೆಂಗಳಿ, ಹೆಬ್ಬಾಳ, ಕಾಳಗಿ ಸೇರಿದಂತೆ ಐದು ಸರ್ಕಾರಿ ಕಾಲೇಜು ಹಾಗೂ ನಾಲ್ಕು ಖಾಸಗಿ ಕಾಲೇಜು ಸೇರಿ ಒಂಬತ್ತು ಕಾಲೇಜಿನ ಒಟ್ಟು 630 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 591 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 48 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ನಕಲನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದ ಒಳಗಡೆ ಬಿಡಲಾಯಿತು. ಕಚೇರಿ ಅಧಿಕ್ಷಕ ಶೌಕಾತಾಲಿ ನಾವದಿಕರ್, ಜಂಟಿ ಪರಿಕ್ಷಾ ಅಧಿಕ್ಷರಾಗಿ ದೇವಿಂದ್ರ ಪಡಶೆಟ್ಟಿ, ಜಾಗೃತ ದಳದ ಸದಸ್ಯರಾಗಿ ವೆಂಕಟೇಶ ಕಾರ್ಯ ನಿರ್ವಹಿಸಿದರು.
ಪರೀಕ್ಷಾ ಅವಧಿಯಲ್ಲಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಸಹಕಾರಿಯಾಗುವಂತೆ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯೊಳಗೆ ನಿಷೇಧಾಜ್ಞೆ ಜಾರಿಗೊಳಿಸಿ ಕಾಳಗಿ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ ಬಿಕೆ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.