ಕಲಬುರಗಿ| ಭೀಮಾ ನದಿ ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಕಡಬೂರ ಗ್ರಾಮ
ಕಲಬುರಗಿ: ಧಾರಾಕಾರ ಮಳೆ, ಭೀಮಾ ನದಿಯಿಂದ ಬಿಡುಗಡೆಯಾದ ನೀರಿನಿಂದ ಚಿತ್ತಾಪುರ ತಾಲೂಕಿನ ಕಡಬೂರ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಭೀಮಾ ನದಿ ಉಕ್ಕಿ ಪ್ರವಾಹ ಬಿಕ್ಕಟ್ಟಿಗೆ ಸಿಲುಕಿರುವ ಗ್ರಾಮದ ನಿವಾಸಿಗಳು, ರಕ್ಷಣೆ ಮಾಡಲು ದೋಣಿಗಳಲ್ಲಿ ಮನೆಗೆ ಬಂದ ತಹಶೀಲ್ದಾರ್ ಅವರಿಗೆ ಕೈ ಮುಗಿದು ಬೇಡಿಕೊಂಡರು. ನದಿ ಪದೇಪದೇ ಪ್ರವಾಹ ಸೃಷ್ಟಿ ಮಾಡುತ್ತಿದೆ. ಮನೆಗಳು ಮುಳುಗುವಾಗ ರಕ್ಷಣೆಗೆ ಬರ್ತೀರಿ. ನೀರು ಇಳಿದ ಮೇಲೆ ಮರೆತು ಬಿಡ್ತೀರಿ. ನಾವು ಇಲ್ಲೇ ಸತ್ತು ಹೋಗ್ತೀವಿ. ಒತ್ತಾಯ ಮಾಡಬೇಡ್ರಿ ಸಾಹೇಬ್ರ ಎಂದು ಗ್ರಾಮಸ್ಥರು ಅಧಿಕಾರಿಗಳ ಬಳಿ ಬೇಸರ ಹೊರಹಾಕಿದರು.
ತಾಲ್ಲೂಕು ಆಡಳಿತ ಹಲವು ಕುಟುಂಬಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.
ಗ್ರಾಮದಲ್ಲಿ ಬಹುತೇಕ ಮನೆಗಳು, ದೇವಸ್ಥಾನ, ದರ್ಗಾ, ಮಸೀದಿಗಳು ನೀರಲ್ಲಿ ಮುಳುಗಿವೆ. ನೂರಾರು ಹಸು, ಎಮ್ಮೆ, ಕುರಿಗಳು ನದಿ ಪಾಲಾಗಿವೆ. ಕೋಳಿಗಳು ಮರ ಹತ್ತಿ ರಕ್ಷಣೆ ಪಡೆದ ದೃಶ್ಯ ಪ್ರವಾಹ ಭೀಕರತೆ ಅನಾವರಣಗೊಳಿಸಿತು. NDRF ತಂಡ ಅರ್ಧ ಊರು ಸ್ಥಳಾಂತರಿಸುವಲ್ಲಿ ಸಫಲವಾಗಿದೆ.
ಕಡಬೂರ ಗ್ರಾಮ ಶೇ.90 ರಷ್ಟು ಮುಳುಗಡೆಯಾಗಿದೆ. ಇಡೀ ಊರಿಗೆ ಪ್ರವಾಹ ಸುತ್ತುವರೆದಿದ್ದು, ಎತ್ತರದ ಪ್ರದೇಶದಲ್ಲಿ ಮೂವತ್ತು ಮನೆಗಳು ಮಾತ್ರ ನಡುಗಡ್ಡೆ ತಾಣದಲ್ಲಿ ಸಿಲುಕಿವೆ. ಇನ್ನಷ್ಟು ನೀರು ಬಂದರೆ ಅಪಾಯ ಎದುರಾಗುವ ಸಾಧ್ಯತೆಯಿದ್ದು, ಜನರು ಮಾತ್ರ ಊರು ಬಿಡಲು ಒಪ್ಪದೇ ನಡು ನೀರಲ್ಲಿ ಉಳಿದಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.