ಕಲಬುರಗಿ | ಅಂತರ್ಜಲ ಹೆಚ್ಚಳಕ್ಕೆ ನವೀಕರಿಸುತ್ತಿರುವ ಕಲ್ಯಾಣಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಭೇಟಿ
ಕಲಬುರಗಿ: ಕೆ.ಪಿ.ಟಿ.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಪಂಕಜ್ ಕುಮಾರ ಪಾಂಡೆ ಅವರು ಸೋಮವಾರ ಕಮಲಾಪೂರ ತಾಲೂಕಿನ ಜೀವಣಗಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಉನ್ನತಿಕರಿಸಲಾಗುತ್ತಿರುವ ಕಲ್ಯಾಣಿ ಕೆಲಸದ ವೀಕ್ಷಣೆಯನ್ನು ಮಾಡಿದರು.
ಗ್ರಾಮಸ್ಥರ ಜೊತೆ ಚರ್ಚಿಸಿ ಕಲ್ಯಾಣಿ ಸಮರ್ಪಕವಾಗಿ ಬಳಕೆ ಮಾಡಬೇಕು. ಸ್ವಚ್ಛತೆ ಕಾಪಾಡಬೇಕು. ಗ್ರಾಮಸ್ಥರಿಗೆ ನೀರಿನ ಗುಣಮಟ್ಟ ಪರೀಕ್ಷಿಸಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮದಲ್ಲಿರುವ ಆರಿವು ಕೇಂದ್ರಕ್ಕೆ ಭೇಟಿ ನೀಡಿದ ಪಂಕಜ್ ಕುಮಾರ ಪಾಂಡೆ ಅವರು, ಕೇಂದ್ರದಲ್ಲಿನ ಸ್ಫರ್ಧಾತ್ಮಕ ಪುಸ್ತಕದ ಬಗ್ಗೆ ಮಾಹಿತಿ ಪಡೆದರು.
ಕಲಬುರಗಿ ಜಿಲ್ಲಾ ಪಂಚಾಯತಿಯ ಆಡಳಿತಾಧಿಕಾರಿಯೂ ಆಗಿರುವ ಪಂಕಜ್ ಕುಮಾರ ಪಾಂಡೆ ಅವರು
ಮಹಾಗಾಂವ್ ಗ್ರಾಮದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಸಮಾಜ ಕಲ್ಯಾಣ ಇಲಾಖೆಯ ನೂತನ ವಸತಿ ನಿಲಯವನ್ನು ವೀಕ್ಷಣೆ ಮಾಡಿದ ಅವರು, ವಸತಿ ನಿಲಯಕ್ಕೆ ಸರಬರಾಜಾಗಿರುವ ಕಾಟ್, ಬೆಡ್, ಅಡುಗೆ ತಯಾರಿಕೆ ಸಾಮಾಗ್ರಿಗಳ ಗುಣಮಟ್ಟ ಪರಿಶೀಲಿಸಿ, ವಸತಿ ನಿಲಯದಲ್ಲಿ ನೈರ್ಮಲ್ಯ ಕಾಪಾಡುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಉಪಹಾರ, ಊಟ ಪೂರೈಸಬೇಕೆಂದು ನಿಲಯದ ಮೇಲ್ವಿಚಾರಕಿಗೆ ನಿರ್ದೇಶನ ನೀಡಿದರು. ಕುರಿಕೋಟಾ ಅಂಗನವಾಡಿ ಕೇಂದ್ರಕ್ಕು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿದರು.
ಮಕ್ಕಳೊಂದಿಗೆ ಊಟ ಸವಿದ ಕಾರ್ಯದರ್ಶಿಗಳು:
ಅವರಾದ (ಬಿ) ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ ಅವರು, ಮಕ್ಕಳೊಂದಿಗೆ ಮಧ್ಯಾಹ್ನದ ಊಟ ಸೇವನೆ ಮಾಡಿ ಅದರ ಗುಣಮಟ್ಟ ಪರಿಶೀಲಿಸಿದರು. ನಂತರ ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ತಾಲೂಕ ಪಂಚಾಯತ್ ಇ.ಓ ನೀಲಗಂಗಾ ಬಬಲಾದ, ತಹಶೀಲ್ದಾರ ಕೆ.ಆನಂದಶೀಲ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.