ಕಲಬುರಗಿ | ಸಿಂಡಿಕೇಟ್ ಸದಸ್ಯರನ್ನು ರಕ್ಷಿಸಲು ಸರಕಾರಕ್ಕೆ ಸುಳ್ಳು ವರದಿ ನೀಡಿದ ಆರೋಪ : ಕುಲಸಚಿವ ಚಂದ್ರಕಾಂತ್ ಯಾತನೂರ್ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿ: ಕಿರುಕುಳ ಆರೋಪ ಹೊತ್ತಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನು ರಕ್ಷಿಸಲು ಕುಲಸಚಿವ ಚಂದ್ರಕಾಂತ್ ಯಾತನೂರ್ ಅವರು ಸರಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದಿಂದ ಕುಲಪತಿ ಹೂವಿನಬಾವಿ ಬಾಬಣ್ಣ ಅವರ ಮೂಲಕ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಗುಲ್ಬರ್ಗ ವಿವಿಯ ಸಿಂಡಿಕೇಟ್ ಸದಸ್ಯರಾದ ಸಿದ್ದಪ್ಪ ಮೂಲಗೆ ಅವರು ವಿಶ್ವವಿದ್ಯಾಲಯದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಿಬ್ಬಂಧಿ/ಅಧಿಕಾರಿ ವರ್ಗದವರಿಗೆ ವಿನಃಕಾರಣ ಕಿರುಕುಳ ನೀಡುತ್ತಿರುವುದನ್ನು ಹಾಗೂ ಕುಲಪತಿಗಳು ಮತ್ತು ಕುಲಸಚಿವರುಗಳಿಗೆ ನಿರಾತಂಕವಾಗಿ ಕೆಲಸ ಮಾಡಲು ಬಿಡದೇ ಆಡಳಿತದಲ್ಲಿಯೂ ಸಹ ಮೂಗು ತೋರಿಸುತ್ತಿರುವುದನ್ನು ಕಂಡು ಅವರ ಸಿಂಡಿಕೇಟ್ ಸಭೆಯ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ, ಎನ್‌ಎಸ್‌ಯುಐ ಸೇರಿದಂತೆ ಇತರೆ ಸಂಘಟನೆಗಳು ಸರ್ಕಾರಕ್ಕೆ ದೂರು ಸಲ್ಲಿಸಿ ಆಗ್ರಹಿಸಿದ್ದವು.
ಸದರಿ ಸದಸ್ಯರ ವಿರುದ್ಧದ ದೂರುಗಳ ಸಂಬಂಧವಾಗಿ ಸದರಿ ಮನವಿ/ದೂರುಗಳಲ್ಲಿನ ಅಂಶಗಳನ್ನು ನಿಯಮನುಸಾರ ಪರಿಶೀಲಿಸಿ ವರದಿ ನೀಡಲು ವಿವಿಗೆ ಕೋರಲಾಗಿತ್ತು. ಆದರೆ, ವಿವಿಯ ಕುಲಸಚಿವರಾದ ಚಂದ್ರಕಾಂತ್ ಯಾತನೂರ್ ಅವರು ಸತ್ಯಶೋಧನೆ ವರದಿ ಬರುವುದಕ್ಕಿಂತ ಮುಂಚೆಯೇ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಅವರನ್ನು ರಕ್ಷಿಸಲು ತಮ್ಮದೇಯಾದ ವ್ಯಕ್ತಿಗತ ಅಭಿಪ್ರಾಯವನ್ನು ಸರಕಾರಕ್ಕೆ ಕಳುಹಿಸಿದ್ದಾರೆ. ಇದು ಖಂಡನೀಯ ಎಂದು ಮನವಿ ಪತ್ರದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಕ್ಕೆ ಸುಳ್ಳು ವರದಿ ನೀಡಿರುವ ಕುಲಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಯ ಪಿಜಿ ಯೂನಿಯನ್ ಅಧ್ಯಕ್ಷ ಚಂದ್ರಕಾಂತ್ ಸಂಗೊಳ್ಳಿಗಿ, ಸಂತೋಷ್ ಕುಮಾರ್ ಎಸ್.ಪಿ, ಸಚಿನ್, ಅಭಿಷೇಕ್, ರಾಚಾಯ್ಯ ಸ್ವಾಮಿ, ಮಾಳು ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.