ಕಲಬುರಗಿ | ಸಮೀಕ್ಷೆಯಿಂದ ಬಿಟ್ಟು ಹೋದವರು ಹತ್ತಿರದ ಪಂಚಾಯತ್, ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ: ಡಿಸಿ ಫೌಝಿಯಾ ತರನ್ನುಮ್
ಕಲಬುರಗಿ: ಪ್ರಸ್ತುತ ರಾಜ್ಯದಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಇದೇ ಅ.18ಕ್ಕೆ ಮುಕ್ತಾಯವಾಗಲಿದ್ದು, ನಾನಾ ಕಾರಣದಿಂದ ಸಮೀಕ್ಷೆಯಿಂದ ಹೊರಗುಳಿದವರು ಸಮೀಪದ ಗ್ರಾಮ ಪಂಚಾಯತ್, ನಗರ-ಸ್ಥಳೀಯ ಸಂಸ್ಥೆ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಚೇರಿಗೆ ಭೇಟಿ ನೀಡಿ ಸಮೀಕ್ಷೆಗೆ ಒಳಪಡಬಹುದಾಗಿದೆ.
ಸಮೀಕ್ಷೆಯಲ್ಲಿ ಭಾಗಿಯಾಗಲು ಇಚ್ಛಿಸುವ ಜಿಲ್ಲೆಯ ಯಾವುದೇ ಕುಟುಂಬ ಅಥವಾ ಕುಟುಂಬದ ಸದಸ್ಯರು ಹತ್ತಿರದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್-ಪುರಸಭೆ, ತಾಲ್ಲೂಕು ಪಂಚಾಯತ್ ಅಥವಾ ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ ಅಲ್ಲಿರುವ ಗಣತಿದಾರರನ್ನು ಕಂಡು ಸಮೀಕ್ಷೆಗೆ ಒಳಪಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಮೀಕ್ಷೆಗೆ ಒಳಗಾಗುವರು ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿ (ಲಭ್ಯವಿದ್ದಲ್ಲಿ) ಹಾಗೂ 6 ವರ್ಷದ ಕೆಳಗಿನ ಮಕ್ಕಳಿದ್ದಲ್ಲಿ ಜನ್ಮ ದಿನಾಂಕ ಅಥವಾ ಜನನ ಪ್ರಮಾಣ ಪತ್ರ ದಾಖಲೆಗಳನ್ನು ಗಣತಿದಾರರ ಮಾಹಿತಿ ನೀಡಿ ಸಮೀಕ್ಷೆಗೆ ಒಳಪಡಬೇಕು ಎಂದು ಅವರು ತಿಳಿಸಿದ್ದಾರೆ.