ಕಲಬುರಗಿ | ವಕ್ಫ್ ನೋಂದಾಯಿತ ಮದರಸಾಗಳಲ್ಲಿ ಅತಿಥಿ ಶಿಕ್ಷಕರ ಹುದ್ದೆಗೆ ನ.10 ರಂದು ಕೌನ್ಸಿಲಿಂಗ್: ಸಂಗಮೇಶ್ವರ
ಕಲಬುರಗಿ: 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಷನ್ ಸಂಸ್ಥೆಯವರ ಸಹಯೋಗದೊಂದಿಗೆ ವಕ್ಫ್ ನೋಂದಾಯಿತ ಮದರಸಾಗಳಲ್ಲಿ ಗಣಿತ, ವಿಜ್ಞಾನ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷಾ ವಿಷಯಗಳಲ್ಲಿ ಬೋಧಿಸಲು ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಸಂರ್ದಶನ/ಡೆಮೊ ತರಗತಿಗಳನ್ನು ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಬೋಧಿಸಲು ಇಚ್ಚಿಸುವ ಸ್ಥಳವನ್ನು ಆಯ್ಕೆ ಮಾಡಲು ಇದೇ ನ.10 ರಂದು ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ್ವರ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10 ಗಂಟೆಗೆ ಕಲಬುರಗಿ ಸ್ಟೇಶನ್ ರಸ್ತೆಯ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮೊದಲನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಕೌನ್ಸಲಿಂಗ್ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಅರ್ಹ ಎಲ್ಲಾ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಜರಾಗಿ ಕೌನ್ಸಲಿಂಗ್‍ನಲ್ಲಿ ಭಾಗವಹಿಸಿ ಬೋಧನೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ತಡವಾಗಿ ಬಂದ ಅಭ್ಯರ್ಥಿಗಳಿಗೆ ಇಚ್ಛಿಸುವ ಸ್ಥಳ ಲಭ್ಯವಾಗದೇ ಇದ್ದಲ್ಲಿ ಖಾಲಿ ಇರುವ ಸ್ಥಾನಗಳ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅತಿಥಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆಯಾದ ಹುದ್ದೆಗೆ ಸಂಬಂಧಿಸಿದಂತ ಶೈಕ್ಷಣಿಕ ಮೂಲ ದಾಖಲಾತಿಗಳು (ಎಸೆಸೆಲ್ಸಿ, ಪಿ.ಯು.ಸಿ., ಡಿಗ್ರಿ, ಬಿ.ಇಡ್./ ಡಿ.ಇಡಿ.) ಹಾಗೂ ಯಾವುದೇ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಮತ್ತಿತರ ದಾಖಲೆ) ಇದರ ಒಂದು ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕೆಂದು ಅವರು ತಿಳಿಸಿದ್ದಾರೆ.