×
Ad

ಕಲಬುರಗಿ | ನ.8ರಂದು ಕೇಂದ್ರೀಯ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ: ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ

Update: 2025-11-06 19:40 IST

ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ 9ನೇ ಘಟಿಕೋತ್ಸವ ಕಾರ್ಯಕ್ರಮವನ್ನು ನ.8ರಂದು ಬೆಳಗ್ಗೆ 10 ಗಂಟೆಗೆ ವಿವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.

ಸಿಯುಕೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಸುಪ್ರಿಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಭಾರತದ ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಅವರು ಭಾಗವಹಿಸಿ, ಭಾಷಣ ಮಾಡಲಿದ್ದಾರೆ ಎಂದರು.

ಈ ಬಾರಿ ವಿಶ್ವವಿದ್ಯಾಲಯದ 27 ಪದವಿ ಕೋರ್ಸ್‌ಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ ತಲಾ ಒಬ್ಬ ವಿದ್ಯಾರ್ಥಿಗೆ ಚಿನ್ನದ ಪದಕ ಪಡೆಯಲಿದ್ದಾರೆ. ಇದರೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ನ ವಿದ್ಯಾರ್ಥಿ ಶಿವಾ ಶಾಹಿತಿ ಸೋಮಿಶೆಟ್ಟಿ, ಪ್ರೊ.ಎ.ಎಂ.ಪಠಾಣ ಚಿನ್ನದ ಪದಕ ಪಡೆಯಲಿದ್ದಾರೆ. 18 ವಿದ್ಯಾರ್ಥಿಗಳು ಪಿಎಚ್‍ಡಿ ಪದವಿ ಹಾಗೂ ಒಬ್ಬ ವಿದ್ಯಾರ್ಥಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಒಟ್ಟು 756 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಿದ್ದು, ಅದರಲ್ಲಿ 628 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 487 ವಿದ್ಯಾರ್ಥಿಗಳು ಭೌತಿಕವಾಗಿ ಹಾಗೂ 141 ವಿದ್ಯಾರ್ಥಿಗಳು ಅನುಪಸ್ಥಿತಿಯಲ್ಲಿ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಗತಿಯ ಕುರಿತು ಮಾತನಾಡಿದ ಅವರು, ಶಿಕ್ಷಕರು ವಿಶ್ವವಿದ್ಯಾಲಯಗಳ ಜೀವಾಳ. ಇಲ್ಲಿವರೆಗೆ 176 ಖಾಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸರಕಾರ 29 ಶಿಕ್ಷಕರ ನೇಮಕಾತಿಗೆ ಅನುಮತಿಯೊಂದಿಗೆ ಗ್ರಂಥಾಲಯ ವಿಜ್ಞಾನ, ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ, ಸಂಖ್ಯಾ ಶಾಸ್ತ್ರ, ಕಂಪೂಟರ್‌ ವಿಜ್ಞಾನ, ಜೆನೆಟಿಕ್ಸ್‌ ಮತ್ತು ಜಿನೋಮ ಮತ್ತು ಬಿಎ ಎಲ್‍ಎಲ್‍ಬಿ ಸೇರಿ 7 ಹೊಸ ವಿಭಾಗಗಳಿಗೆ ಅನುಮತಿ ನೀಡಿದ್ದು ಈಗಾಗಲೇ ನೇಮಕಾತಿಗಾಗಿ ಅಧಿಸೂಚನೆಯನ್ನು ಹೋರಡಿಸಲಾಗಿದ್ದು, ಈ ಕೋರ್ಸ್‌ಗಳನ್ನು 2026-27 ಸಾಲಿನಿಂದ ಪ್ರಾರಂಭಿಸಲಾಗುವುದು. ಇದಲ್ಲದೆ ಮತ್ತೆ ನಾವು ಇನ್ನೂ 7 ಹೊಸ ವಿಭಾಗಗಳಿಗೆ ಬೇಡಿಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಸಂಶೋಧನೆ ಮತ್ತು ನಾವಿನ್ಯತೆಯ ಕುರಿತು ಮಾತನಾಡಿದ ಅವರು, ವಿಶ್ವವಿದ್ಯಾಲಯವು ಎ.ಎನ್ ಆರ್. ಎಫ್ ಪೇರ್ಡ ಪ್ರೊಜೆಕ್ಟನಲ್ಲಿ 12.1 ಕೋಟಿ ರೂ. ಅನುದಾನ ಪಡೆದಿದೆ. ಅದೇ ರೀತಿ ಸುಸ್ಥಿರ ಕ್ಯಾಂಪಸ್ ಅಭಿವೃದ್ದಿಗಾಗಿ 1.2 ಕೋಟಿ ರೂ., ವಿಶ್ವೇಶ್ವರಯ್ಯ ಸಂಶೋಧನಾ ಯೋಜನೆಯಲ್ಲಿ 3 ಕೋಟಿ ರೂ., ಸಿರಿಧಾನ್ಯ ಸಂಶೋಧನೆಗಾಗಿ 30 ಲಕ್ಷ ರೂ. ಹಾಗೂ ಐಸಿಎಆರ್ ನಿಂದ 7 ಯೋಜನೆಗಳಿಗೆ 1.05 ಕೋಟಿ ರೂ. ಅನುದಾನ ಪಡೆದಿದೆ ಎಂದರು.

ಮೂಲ ಸೌಕರ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಲ್ಲಿ ಶೈಕ್ಷಣಿಕ ಸಮುಚ್ಚಯ, ಶಿಕ್ಷಕರ ವಸತಿ ಗೃಹ ಹಾಗೂ 1,000 ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ಸರಕಾರ 201 ಕೋಟಿ ರೂ. ಗಳನ್ನು ನೀಡಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಮುಂದಿನ 15 ತಿಂಗಳಲ್ಲಿ ಇವು ಪೂರ್ಣಗೊಳ್ಳಲಿವೆ ಎಂದರು.

ಬೆಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಸೆಂಟರ್ ಆಫ್ ಎಕ್ಸಲೆನ್ಸನ್ನು ಇಲ್ಲಿಯೇ ಈ ಭಾಗದಲ್ಲಿ ಸಂಶೋಧನೆಗೆ ಒತ್ತು ಕೊಡಲು (ಸಿಯುಕೆ ಕ್ಯಾಂಪಸ್ನ ಲ್ಲಿ) ಪ್ರಾರಂಭಿಸಲಾಗುತ್ತಿದೆ, ಇದರೊಂದಿಗೆ ಪಿಸಿಬಿ ಲ್ಯಾಬ್ ಪ್ರಾರಂಭಿಸಲಾಗಿದೆ, ಇನ್ಸ್ಟ್ರುಮೆಂಟೆಶನ್ ಲಾಬ್‍ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಭಾರ ಕುಲಸಚಿವ ಡಾ.ಚನ್ನವೀರ ಆರ್.ಎಂ., ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಸಿನ್ನೂರ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ.ಜೋಹೆರ್, ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News